ಅಥಣಿ: ಸೂರ್ಯ ಚಂದ್ರ ಹುಟ್ಟೋದು ಎಷ್ಟು ಸತ್ಯವೋ ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಆಯ್ಕೆ ಕೂಡ ಅಷ್ಟೇ ಸತ್ಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಾರ್ಯಕರ್ತರ ಸಭೆ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್ ಗೆಲುವು ಖಚಿತ. ನಮ್ಮ ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ಇರೋದು ಸತ್ಯ. ಅದನ್ನು ಮೂರು ದಿನಗಳಲ್ಲಿ ಸರಿ ಮಾಡುತ್ತೇನೆ ಎಂದರು. ಪ್ರಾರಂಭದಲ್ಲಿ ಹೊಸ ಸೊಸೆ ಮನೆಗೆ ಬಂದಾಗ ವ್ಯತ್ಯಾಸ ಇದ್ದೇ ಇರುತ್ತೆ, ಅದನ್ನ ಸರಿಪಡಿಸಿಕೊಂಡು ಹೋಗುತ್ತೇವೆ. ನನಗೆ ಯಾವುದೇ ಮುನಿಸಿಲ್ಲ, ಮುನಿಸು ಇದ್ದಿದ್ರೆ ಇಲ್ಲಿ ಬರ್ತಾನೆ ಇರ್ಲಿಲ್ಲ. ನಾನು ಯಾವಾಗಲೂ ನೇರ ಮತ್ತು ಸ್ಪಷ್ಟ ಇದೀನಿ. ನೂರಕ್ಕೆ ನೂರರಷ್ಟು ನಾವೇ ಮತ ಹಾಕಿಸಿ ಕುಮಟಳ್ಳಿ ಗೆಲ್ಲಿಸ್ತಿವಿ ಎಂದರು.
ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ದೊಡ್ಡ ನಾಯಕತ್ವ ವಹಿಸಿದ್ದೇವೆ. ರಾಜ್ಯದ ಉಪ ಮುಖ್ಯಮಂತ್ರಿ ಇದ್ದಾರೆ. ಮಹೇಶ್ ಕುಮಟಳ್ಳಿ ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದರಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ. ಪರಸ್ಪರ ಕಾರ್ಯಕರ್ತರಲ್ಲಿ ವ್ಯತಿರಿಕ್ತ ಭಾವನೆಗಳು ಸ್ವಾಭಾವಿಕ ಅದು ತಪ್ಪು ಅನ್ನಲ್ಲ. ಎಲ್ಲರೂ ಕೂತು ಸಮಸ್ಯೆ ಬಗೆ ಹರಿಸಿಕೊಳ್ಳುತ್ತೆವೆ. ಲಕ್ಷ್ಮಣ ಸವದಿ ನಾಯಕತ್ವದಲ್ಲೇ ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರೆ. ಇದು ಅವರಿಗೆ ಶಕ್ತಿ ತುಂಬುವ ಚುನಾವಣೆ. ನಮ್ಮ ಕಾರ್ಯಕರ್ತರು, ಬೆಂಬಲಿಗರು ಶಕ್ತಿ ತುಂಬುವ ವಿಶ್ವಾಸವಿದೆ ಎಂದು ಹೇಳಿದ್ರು.