ಬೆಳಗಾವಿ : ಸಾರ್ವಜನಿಕ ಗಣೇಶೋತ್ಸವ ಆಚರಣೆ ಸಂಬಂಧ ನಾಳೆ ಗಣೇಶ ಮಹಾಮಂಡಳಿಗಳು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಗಣೇಶೋತ್ಸವಕ್ಕೆ ಐದು ದಿನಗಳ ಕಾಲ ಷರತ್ತು ಬದ್ಧ ಅನುಮತಿ ನೀಡಿದ್ದಕ್ಕೆ ಬೆಳಗಾವಿಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಸಿ, 11 ಗಂಟೆಗೆ ಎರಡು ಗಣೇಶ ಮಹಾಮಂಡಳಿಗಳು, ಪಾಲಿಕೆ ಆಯುಕ್ತರು, ನಗರ ಪೊಲೀಸ್ ಆಯುಕ್ತರ ಜೊತೆಗೆ ಸಭೆ ಕರೆದಿದ್ದೇನೆ. ಬೆಳಗಾವಿಯಲ್ಲಿನ ಗಣೇಶೋತ್ಸವ ಪರಂಪರೆ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ. ಮುಂದೆ ಸರ್ಕಾರದ ಸೂಚನೆ ಮೇರೆಗೆ ಆಚರಣೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಶೇ.0.4ರಷ್ಟು ಕೋವಿಡ್ ರೇಟ್ ಇದೆ. ಪ್ರತಿದಿನ ಐದು ಸಾವಿರ ಕೋವಿಡ್ ಟೆಸ್ಟ್ ಮಾಡಿದರೂ ಕೂಡ ಸುಮಾರು 30, 35, 40 ಪಾಸಿಟಿವ್ ಕೇಸ್ ಬರುತ್ತಿವೆ. ಹೀಗಾಗಿ, ಬೆಳಗಾವಿ ಕೋವಿಡ್ ನಿಯಂತ್ರಣದಲ್ಲಿದೆ. ಅದೇ ರೀತಿ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದರೆ ಆ ಪ್ರದೇಶದಲ್ಲಿ ಸಂಪೂರ್ಣ ಟೆಸ್ಟ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಓದಿ: ಬ್ರಾಹ್ಮಣರಿಗೆ 13.77 ಕೋಟಿ ರೂ. ಸಾಂದೀಪಿನಿ ವಿದ್ಯಾರ್ಥಿವೇತನ ಬಿಡುಗಡೆ ಪ್ರಕ್ರಿಯೆಗೆ ಸಿಎಂ ಚಾಲನೆ