ಚಿಕ್ಕೋಡಿ (ಬೆಳಗಾವಿ) : ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಸೊಸೆಯನ್ನು ಕೊಲೆ ಮಾಡಿರುವ ಆತಂಕಕಾರಿ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯಲ್ಲಿ ಗೃಹಿಣಿಯನ್ನು ಉಸಿರುಗಟ್ಟಿಸಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀದೇವಿ ದೀಪಕ್ ಬೇವಿನಕಟ್ಟಿ (31) ಕೊಲೆಯಾದ ಗೃಹಿಣಿ ಎಂದು ಗುರುತಿಸಲಾಗಿದೆ. ದಿನನಿತ್ಯ ಅತ್ತೆ ಸೊಸೆ ಜಗಳ ನಡೆಯುತ್ತಿತ್ತು ಹಾಗೂ ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಶ್ರೀದೇವಿಯನ್ನು ಗಂಡ ದೀಪಕ್ ರಾಮಚಂದ್ರ ಬೇವಿನಕಟ್ಟಿ ಜೊತೆ ಅವಳ ಅತ್ತೆ ಪದ್ಮಾವತಿ ರಾಮಚಂದ್ರ ಬೇವಿನಕಟ್ಟಿ ಹಾಗೂ ಮೃತಳ ಮಾವ ರಾಮಚಂದ್ರ ಬೇವಿನಕಟ್ಟಿ ಮೂವರು ಸೇರಿ ಸೊಸೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಎಂದು ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೂವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಯಮಕರಮಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮನೆ ಬಿಟ್ಟು ಕೊಡದಿದ್ದಕ್ಕೆ ಅತ್ತೆಯ ಹತ್ಯೆ: 2022 ರ ಅಕ್ಟೋಬರ್ನಲ್ಲಿ ಆಸ್ತಿ ಬೇಕೆಂದು ಪೀಡಿಸುತ್ತಿದ್ದ ಸೊಸೆ ಕೊನೆಗೆ ಅತ್ತೆಯನ್ನೇ ಕೊಂದಿದ್ದ ಪ್ರಕರಣ ನಡೆದಿತ್ತು. ರಾಣಿಯಮ್ಮ (76) ಕೊಲೆಯಾದ ವೃದ್ಧೆ. ರಾಣಿಯಮ್ಮ ಶ್ರೀರಾಂಪುರ 7ನೇ ಮುಖ್ಯರಸ್ತೆಯಲ್ಲಿ ವಾಸ ಮಾಡುತ್ತಿದ್ದರು. ಗಂಡ ಕೂಡ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದ. ತನ್ನ ಮೂರು ಜನ ಗಂಡುಮಕ್ಕಳಿಗೆ ಸಮಾನವಾಗಿ ಒಂದೊಂದು ಮನೆ ನೀಡಿದ್ದರು. ನಂತರ ಯಾರ ಸಹವಾಸವೂ ಬೇಡ ಅಂತಾ ತಾನೇ ಒಂದು ಮನೆಯಲ್ಲಿ ವಾಸವಿದ್ದರು.
ಸ್ವತಃ ಊಟ ಬಟ್ಟೆ ಎಲ್ಲವನ್ನೂ ನೋಡಿಕೊಂಡು ಯಾರ ಸಹವಾಸಕ್ಕೂ ಹೋಗದೇ ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಕಷ್ಟದ ಬದುಕು ಕಟ್ಟಿಕೊಂಡಿದ್ದರು. ಆದರೆ ರಾಣಿಯಮ್ಮ ಇದ್ದ ಸಣ್ಣದೊಂದು ಕೋಣೆಯ ಮೇಲೂ ಎರಡನೇ ಸೊಸೆ ಸುಗುಣ ಕಣ್ಣುಬಿದ್ದಿತ್ತು. ಅಷ್ಟಕ್ಕೂ ಈ ಸುಗುಣ ದೂರದವಳಲ್ಲ. ಸ್ವತಃ ರಾಣಿಯಮ್ಮ ತಮ್ಮನ ಮಗಳೇ. ನಮ್ಮವಳೇ ಅಂತಾ ತನ್ನ ಎರಡನೇ ಮಗನಿಗೆ ಮದುವೆ ಮಾಡಿಸಿದ್ದರು. ಆದರೆ ಆಕೆಯೇ ಜೀವ ತೆಗೆದಿದ್ದಳು.
ಅತ್ತೆಯೊಬ್ಬಳು ಸೊಸೆಯ ತಲೆ ಕಡಿದು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದ ಭಯಾನಕ ಘಟನೆ ಕಳೆದ ವರ್ಷದ ಆಗಸ್ಟ್ನಲ್ಲಿ ಆಂಧ್ರಪ್ರದೇಶದಲ್ಲಿ ನಡೆದಿತ್ತು. ಕೌಟುಂಬಿಕ ಕಲಹ ಹಾಗೂ ಆಸ್ತಿ ವಿವಾದವೇ ಘಟನೆಗೆ ಕಾರಣವಾಗಿತ್ತು. ರಾಯಚೋಟಿಯ ಕೆ.ರಾಮಾಪುರಂ ಪ್ರದೇಶದಲ್ಲಿ ವಾಸವಿದ್ದ ವಸುಂಧರಾ ಅವರನ್ನು ಆಕೆಯ ಸ್ವಂತ ಅತ್ತೆಯ ಸಹೋದರಿ ಸುಬ್ಬಮ್ಮ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಒಂದಿನ ಮಧ್ಯಾಹ್ನ ಸೊಸೆಯನ್ನು ಮನೆಗೆ ಕರೆದ ಅತ್ತೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ಚಾಕು ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ವಸುಂಧರಾ ಅವರ ರುಂಡ ಮತ್ತು ಮುಂಡವನ್ನು ಕ್ರೂರವಾಗಿ ಕತ್ತರಿಸಿ ಬೇರ್ಪಡಿಸಿದ್ದರು. ಬಳಿಕ ವಸುಂಧರಾ ತಲೆ ಹಿಡಿದು ಠಾಣೆಗೆ ತೆರಳಿದ್ದರು. ಆ ನಂತರ ಪೊಲೀಸರ ಸೂಚನೆ ಮೇರೆಗೆ ಮನೆಗೆ ಬಂದು ಅತ್ತೆ ಸುಬ್ಬಮ್ಮ ಶವದ ಬಳಿ ತಲೆಯನ್ನು ಇಟ್ಟಿದ್ದರು.
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ: ಕೊಲೆ?