ಬೆಳಗಾವಿ: ವಿವಾದಾತ್ಮಕ ವಾಟ್ಸಪ್ ಸ್ಟೇಟಸ್‌ನಿಂದ ನೆರೆಯ ರಾಜ್ಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ಜಿಲ್ಲೆಯಲ್ಲಿ ಬೆಳಗಾವಿಯಲ್ಲೂ ಇಬ್ಬರು ತಮ್ಮ ವಾಟ್ಸಪ್ ಸ್ಟೇಟಸ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಬೆಳಗಾವಿ ನಗರದ ಇಬ್ಬರು ವಾಟ್ಸಪ್ನಲ್ಲಿ ಆಕ್ಷೇಪಾರ್ಹ ಸ್ಟೇಟಸ್ ಹಾಕಿ ಅಪಮಾನ ಮಾಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಸಿಪಿ ನಾರಾಯಣ ಭರಮನಿ ಅವರಿಗೆ ಸಂಘಟನೆಯವರು ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ನಗರಸೇವಕ ಶಂಕರ ಪಾಟೀಲ ಅವರು, ಕೊಲ್ಹಾಪುರ ಮತ್ತು ನಿಪ್ಪಾಣಿಯಲ್ಲಿ ಘಟನೆ ನಡೆದ ಬಳಿಕ ಬೆಳಗಾವಿಯಲ್ಲೂ ಶಾಂತಿ ಸುವ್ಯವಸ್ಥೆ ಕದಡುವ ಯತ್ನ ನಡೆದಿದೆ. ಈ ಬಗ್ಗೆ ಸಾಕ್ಷಿಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಕೊಲ್ಹಾಪುರದಲ್ಲಿ ನಡೆದಂತಹ ಘಟನೆ ನಮ್ಮ ಬೆಳಗಾವಿಯಲ್ಲಿ ಆಗಬಾರದು. ಯಾರೂ ಕೂಡ ಸಮಾಜದಲ್ಲಿ ಶಾಂತಿಗೆ ಭಂಗ ತರಬಾರದು ಎಂದು ಒತ್ತಾಯಿಸಿದರು.
ಸೂಕ್ತ ಕ್ರಮಕ್ಕೆ ಶ್ರೀರಾಮಸೇನಾ ಮುಖಂಡರ ಆಗ್ರಹ : ಬಳಿಕ ಶ್ರೀರಾಮಸೇನಾ ಮುಖಂಡ ರವಿ ಕೋಕಿತ್ಕರ್ ಮಾತನಾಡಿ, ಸ್ಟೇಟಸ್ ಮತ್ತು ಇನ್ಸ್ಟಾಗ್ರಾಂನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹರಿಬಿಟ್ಟು ಬೆಳಗಾವಿಯಲ್ಲಿ ಶಾಂತಿ ಕದಡುವ ವಾತಾವರಣ ನಿರ್ಮಿಸುವ ಯತ್ನ ನಡೆದಿದೆ. ಇದು ನಮಗೆ ಗೊತ್ತಾಗುತ್ತಿದ್ದಂತೆ ಪೊಲೀಸ್ ಠಾಣೆಗೆ ಆಗಮಿಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಕೊಟ್ಟಿದ್ದೇವೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳ ವಿಡಿಯೋಗಳನ್ನು ಜೋಡಿಸಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು. ಒಟ್ಟಾರೆ ಸ್ಟೇಟಸ್ಗಳ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕಿಡಿಗೇಡಿಗಳಿಗೆ ಹೆಡೆಮುರಿ ಕಟ್ಟುವಂತೆ ಹಿಂದೂಪರ ಸಂಘಟನೆಗಳ ಮುಖಂಡರು ಇಂದು ಆಗ್ರಹಿಸಿದ್ದಾರೆ.
ಕೊಲ್ಹಾಪುರದಲ್ಲಿ ಗಲಾಟೆ : ನಿನ್ನೆ ದಿನ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿರುವ ಸಂಬಂಧ ಕೊಲ್ಹಾಪುರದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಇದನ್ನು ವಿರೋಧಿಸಿ ಹಲವರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಹಿಂದೂ ಪರ ಸಂಘಟನೆಗಳು ಕೊಲ್ಹಾಪುರ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು. ನಗರದ ಛತ್ರಪತಿ ಶಿವಾಜಿ ಮಹಾರಾಜ್ ಚೌಕ್‌ಗೆ ಪ್ರತಿಭಟನಾಕಾರರು ಆಗಮಿಸಿ, ಹಿಂದುತ್ವವಾದಿಗಳ ಮೇಲಿನ ಆರೋಪಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಆಕ್ಷೇಪಾರ್ಹ ಪೋಸ್ಟ್ ವಿರುದ್ಧ ಪ್ರತಿಭಟನೆ: ಪೊಲೀಸರಿಂದ ಲಾಠಿ ಪ್ರಹಾರ