ಬೆಳಗಾವಿ : ಅಪರಾಧ ತಡೆ ಮಾಸಾಚರಣೆ ಮಾದಕ ದ್ರವ್ಯ ವಿರೋಧಿ ನಿಮಿತ್ತ ಜಿಲ್ಲಾ ಪೊಲೀಸ್ ವತಿಯಿಂದ ಆಶ್ರಯದಲ್ಲಿ ಎರಡು ದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಬಿಆರ್ಡಿಎಸ್ ತಂಡ ಪ್ರಥಮ ಸ್ಥಾನ ಪಡೆದಿದೆ. ಬೆಳಗಾವಿಯ ಎಲೆಕ್ಟ್ರಾನಿಕ್ ಮೀಡಿಯಾ ದ್ವೀತಿಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಪ್ರತಿವರ್ಷದಂತೆ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಸೌಹಾರ್ದಯುತ ಮೆಗಾ ಮ್ಯಾಚ್ ಅನ್ನು ಆಯೋಜಿಸಲಾಗುತ್ತಿತ್ತು. ಈ ವರ್ಷ ಕೂಡ ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮಾದಕ ದ್ರವ್ಯ ವಿರೋಧಿ ಅಂಗವಾಗಿ ಆಯೋಜನೆಗೊಂಡ ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಬೆಳಗಾವಿಯ ಕೆಎಸ್ಆರ್ಪಿ ತಂಡ, ಡಾಕ್ಟರ್ ತಂಡ, ಚಿಕ್ಕೋಡಿ ಮೀಡಿಯಾ, ಮಹಾನಗರ ಪಾಲಿಕೆ ಕಮಿಷನರ್ ತಂಡ, ಬಿಆರ್ಡಿಎಸ್ ತಂಡ, ವಕೀಲರ ತಂಡ, ಎಸ್‍ಪಿ 11, ಇಲೆಕ್ಟ್ರಾನಿಕ್ ಮೀಡಿಯಾ, ಡಿಸಿ 11, ಕಮಿಶನರ್ ಪೊಲೀಸ್11, ಪ್ರಿಂಟ್ ಮೀಡಿಯಾ ಮತ್ತು ಪೊಲೀಸ್ 11 ತಂಡಗಳು ಭಾಗವಹಿಸಿದ್ದವು.
ಎರಡು ದಿನಗಳ ಕಾಲ ನಡೆದ ಪಂದ್ಯದಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಮತ್ತು ಬಿಆರ್ಡಿಎಸ್ ಟೀಂಗಳ ನಡುವೆ ರೋಮಾಂಚಕ ಫೈನಲ್ ಮ್ಯಾಚ್ ನಡೆಯಿತು. ಬಿಆರ್ಡಿಎಸ್ ತಂಡ 10 ಓವರ್ನಲ್ಲಿ 112 ರನ್ ಗಳಿಸಿತು.
ಈ ಮೊತ್ತವನ್ನ ಬೆನ್ನತ್ತಿದ ಎಲೆಕ್ಟ್ರಾನಿಕ್ ಮೀಡಿಯಾ ತಂಡ 86 ರನ್ ಗಳಿಸುವಷ್ಟರಲ್ಲಿ ಆಲ್ ಔಟ್ ಆದ ಪರಿಣಾಮ, ಬಿಆರ್ಡಿಎಸ್ ತಂಡ ಈ ಬಾರಿಯ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಬೆಳಗಾವಿ ಎಸ್‍ಪಿ ನಿಂಬರಗಿ ಮಾತನಾಡಿ, ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಲು ಸಹಕಾರಿ ಆಗಲಿದೆ. ಹೀಗಾಗಿ, ಸ್ಪರ್ಧಾಳುಗಳು ಕ್ರೀಡಾ ಮನೋಭಾವದೊಂದಿಗೆ ಆಟವನ್ನು ಆಡಬೇಕು.
ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಎರಡು ದಿನಗಳ ಕಾಲ ನಡೆದ ಪಂದ್ಯದಲ್ಲಿ ಭಾಗವಹಿಸಿದ ಎಲ್ಲ ತಂಡದವರು ಉತ್ತಮ ಆಟ ಆಡಿದ್ದಾರೆ. ಹಾಗಾಗಿ, ಎಲ್ಲ ತಂಡ ವಿಜಯಶಾಲಿ ಆಗಿವೆ ಎಂದರು.