ಬೆಳಗಾವಿ : ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ವ್ಯಾಕ್ಸಿನ್ ಪ್ರಮಾಣ ಕೊರತ ಆಗಿದೆ. 150 ಲಸಿಕಾ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ. ನಗರದ ಬೀಮ್ಸ್ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 150 ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ಔಟ್ ಆಫ್ ಸ್ಟಾಕ್ ಎಂದು ಬರೆಯಲಾಗಿದೆ.
ಸದ್ಯ ಬೆಳಗಾವಿಯಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡು ಲಸಿಕೆಗಳು ಖಾಲಿ ಆಗಿವೆ. ಇತ್ತ ಲಸಿಕೆ ಪಡೆಯಲು ಆಗಮಿಸಿರುವ ಸಾರ್ವಜನಿಕರು ವ್ಯಾಕ್ಸಿನ್ ಔಟ್ ಆಫ್ ಸ್ಟಾಕ್ ಎಂಬ ಬೋರ್ಡ್ ನೋಡಿ ವಾಪಸ್ ತೆರಳುತ್ತಿದ್ದಾರೆ. ಈ ವೇಳೆ ವ್ಯಾಕ್ಸಿನ್ ಸಿಗದಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಭೀತಿ ಇದ್ದರೂ ವ್ಯಾಕ್ಸಿನ್ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆ ಅಷ್ಟೇ ಅಲ್ಲ, ಖಾಸಗಿ ಆಸ್ಪತ್ರೆಯಲ್ಲೂ ವ್ಯಾಕ್ಸಿನ್ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ 780 ರೂ. ಪಡೆದು ಲಸಿಕೆ ನೀಡುತ್ತಿದ್ದರು. ಆದರೆ, ಅಲ್ಲಿಯೂ ಖಾಲಿ ಆಗಿದೆ ಎಂದು ಹೇಳುತ್ತಿದ್ದಾರೆ. ನಾವು ಇಲ್ಲಿಯೂ 780 ರೂ. ದುಡ್ಡು ಕೊಡಲು ರೆಡಿ ಆದ್ರೆ ವ್ಯಾಕ್ಸಿನ್ ಕೊಡಲಿ ಎಂದರು.
ಮೊದಲೇ ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ, ಗೋವಾ ಗಡಿ ಹಂಚಿಕೊಂಡಿದೆ. ಹೀಗಾಗಿ, ಪ್ರತಿಯೊಬ್ಬರಿಗೂ ಲಸಿಕೆ ನೀಡುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಇದಲ್ಲದೇ ಕಾರ್ಖಾನೆ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೋವಿಡ್ ಲಸಿಕೆ ಕಡ್ಡಾಯ ಮಾಡಿದೆ. ಹೀಗಾಗಿ, ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೂ ಕೂಡ ಕಳೆದ ನಾಲ್ಕೈದು ದಿನಗಳಿಂದ ಲಸಿಕೆ ಪಡೆಯಲು ಪರದಾಡುವಂತಾಗಿದೆ. ವ್ಯಾಕ್ಸಿನೇಷನ್‌ಗೆ ಬಂದು ಜನ ವಾಪಸ್ ತೆರಳುತ್ತಿದ್ದಾರೆ.