ಅಥಣಿ (ಬೆಳಗಾವಿ): 'ವೈದ್ಯೋ ನಾರಾಯಣೋ ಹರಿ' ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ. ಸಾಕಷ್ಟು ಪ್ರಸಂಗಗಳಲ್ಲಿ ವೈದ್ಯರು ಅನೇಕರಿಗೆ ಪುನರ್ಜನ್ಮ ನೀಡಿದ್ದಾರೆ. ಎಷ್ಟೋ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಆದರೆ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಇದಕ್ಕೆ ತದ್ವಿರುದ್ಧವಾದ ವ್ಯವಸ್ಥೆ ಕಾಣುತ್ತಿದೆ.
ಕೊರೊನಾ ಹಾವಳಿಯ ಸಂಕಷ್ಟ ಕಾಲದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವಾಗ ಹೆರಿಗೆ ಚಿಕಿತ್ಸೆಗಾಗಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ತಾಲೂಕಾಸ್ಪತ್ರೆಯಲ್ಲಿ ಹಣ ನೀಡದಿದ್ದರೆ ರೋಗಿಗಳನ್ನು ಮಾತನಾಡಿಸುವುದೇ ಇಲ್ಲ. ಇನ್ನು ಸಮರ್ಪಕ ಚಿಕಿತ್ಸೆ ಕನಸಿನ ಮಾತಾಗಿದೆ. ಒಳಗೆ ಹೋದರೆ ಸಾಕು, ಖಾಸಗಿ ಆಸ್ಪತ್ರೆಗಳಂತೆ ಇಲ್ಲಿಯೂ ಪ್ರತಿಯೊಂದು ಚಿಕಿತ್ಸೆಗೂ ಇಂತಿಷ್ಟು ಹಣ ನೀಡಬೇಕು ಎಂದು ದರ ನಿಗದಿ ಮಾಡಲಾಗಿದೆ.
ಸಿಜೇರಿಯನ್ ಹೆರಿಗೆ ಮಾಡಿದರೆ ಸುಮಾರು 6 - 7 ಸಾವಿರ ರೂಪಾಯಿ ಕೊಡಬೇಕೆಂಬ ಪರಿಸ್ಥಿತಿ ಇದೆ. ಸಾಮಾನ್ಯ ಹೆರಿಗೆಗೂ ಕೂಡ ಕನಿಷ್ಠ 3 ಸಾವಿರ ಹಣ ನೀಡಬೇಕು. ತಾಲೂಕು ವೈದ್ಯಾಧಿಕಾರಿ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗುತ್ತಿಲ್ಲ ಎಂದು ಅಥಣಿ ಘಟಕದ ಕರ್ನಾಟಕ ವಿಜಯ ಸೇನೆಯ ಅಧ್ಯಕ್ಷ ಚಿದಾನಂದ ಶೇಗುಣಸಿ ಅಳಲು ತೋಡಿಕೊಂಡರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಸರ್ಕಾರಿ ಆಸ್ಪತ್ರೆಯಲ್ಲಿ ಯಾರು ಹಣ ಪಡೆದಿದ್ದಾರೆ ಎಂದು ಸಾರ್ವಜನಿಕರು ಹೇಳಿದರೆ ಅವರ ಮೇಲೆ ಕ್ರಮ ಜರುಗಿಸುತ್ತೇವೆ. ಬಡವರು, ನಿರ್ಗತಿಕರಿಂದ ಚಿಕಿತ್ಸೆಗಾಗಿ ಹಣ ಪಡೆಯುತ್ತಿರುವದು ಸಾಬೀತಾದರೆ ಕೂಡಲೇ ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇವೆ ಎಂದರು.