ಗೋಕಾಕ್ (ಬೆಳಗಾವಿ): ರಾಜ್ಯದಲ್ಲಿ ಜಾರಕಿಹೊಳಿ ಬ್ರ್ಯಾಂಡ್ ಸ್ಟಾರ್ಟ್ ಆಗಲು ಸತೀಶ್ ಜಾರಕಿಹೊಳಿ ಕಾರಣ. ಸತೀಶ್ ಜಾರಕಿಹೊಳಿಯವರು ಬಹಳಷ್ಟು ಜನರನ್ನು ಬೆಳೆಸಿದ್ದಾರೆ. ಬಾಲಚಂದ್ರ ಮತ್ತು ರಮೇಶ್ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ. ಆಪರೇಷನ್ ಕಮಲ ನಡೆದಾಗ ಬಾಲಚಂದ್ರ ಜಾರಕಿಹೊಳಿ ಬಗ್ಗೆ ಜನರಿಗೆ ಗೊತ್ತಾಯ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿಲ್ಲ. ಅವರಿಗೆ ಇಂತಹ ಕೆಲಸ ಮಾಡಿದ್ದೇನೆ ಅಂತಾ ಹೇಳಲು ಏನೂ ಇಲ್ಲ. ರಮೇಶ್ ಜಾರಕಿಹೊಳಿ ಹೆಸರು ಇರಲು ಕಾರಣ ಸತೀಶ್ ಜಾರಕಿಹೊಳಿ. ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಏನೂ ಕೆಲಸ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಎಂದಿಗೂ ಸಹ ರಮೇಶ್ ಜಾರಕಿಹೊಳಿಗೆ ಮೋಸ ಮಾಡಿರಲಿಲ್ಲ. ಸತೀಶ್ ಜಾರಕಿಹೊಳಿಯವರನ್ನ ತೆಗೆದು ರಮೇಶ್‌ರನ್ನು ಮಂತ್ರಿ ಮಾಡಿದ್ದರು. ಆದರೂ ಕೂಡ ಪಕ್ಷಾಂತರ ಮಾಡಿ ಮೋಸ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಸೋಲಿಸಲು ಲಖನ್, ಸತೀಶ್‌ರಿಂದ ಮಾತ್ರ ಸಾಧ್ಯ ಎಂದು ಗೊತ್ತಿತ್ತು. ಟಿಕೆಟ್ ನೀಡಬೇಕಾದರೆ ಲಖನ್ ಜಾರಕಿಹೊಳಿ ಮೇಲೆ ನಮಗೆ ವಿಶ್ವಾಸ ಇತ್ತು. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುವಂತಹ ಫಲಿತಾಂಶ ಗೋಕಾಕ್‌ನಲ್ಲಿ ಬರುತ್ತೆ. ನೈತಿಕತೆ, ಪ್ರಜಾಪ್ರಭುತ್ವ ಗೆಲ್ಲಿಸುವ ಚುನಾವಣೆ ಇದಾಗಿದ್ದು, ಲಖನ್ ಜಾರಕಿಹೊಳಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.