ಬೆಳಗಾವಿ: ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ವೈರಸ್ ಎರಡನೇ ಪ್ರಭೇದ ಪತ್ತೆಯಾದ ಹಿನ್ನೆಲೆ ನಿನ್ನೆ ರಾತ್ರಿಯೇ ಕಂದಾಯ ಸಚಿವ ಆರ್.ಅಶೋಕ್ ಕರೆ ಮಾಡಿ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಳುವಂತೆ ಸಲಹೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.
ಬೈಲವಾಡ ಗ್ರಾಮದಲ್ಲಿ ಮಾತನಾಡಿದ ಅವರು, ಗಡಿ ಜಿಲ್ಲೆಯವರು ಸಾಕಷ್ಟು ನಿಗಾ ವಹಿಸುವಂತೆ ಕಂದಾಯ ಸಚಿವರು ಕರೆ ಮಾಡಿ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ನಿಪ್ಪಾಣಿ ತಹಶೀಲ್ದಾರ್ಗೆ ಕರೆ ಮಾಡಿ ತಕ್ಷಣ ಚೆಕ್ ಪೋಸ್ಟ್ ನಿರ್ಮಾಣ ಮಾಡುವಂತೆ ತಿಳಿಸಿದ್ದೇನೆ.
ಮಹಾರಾಷ್ಟ್ರದಿಂದ ಬರುವ ಜನರಿಗೆ ಕಡ್ಡಾಯವಾಗಿ ಕೊರೊನಾ ನೆಗೆಟಿವ್ ಪ್ರಮಾಣಪತ್ರ ತರಬೇಕೆಂದು ಸೂಚನೆ ಕೊಡಲಾಗುವುದು. ಇಲ್ಲವಾದರೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು. ಇದರ ಜೊತೆಗೆ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಕೊರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ ತಿಳಿಸಲಾಗಿದೆ ಎಂದರು.