ಬೆಳಗಾವಿ/ಚಿಕ್ಕೋಡಿ: ಸಿಎಂ ಕಾರ್ಯಕ್ರಮದ ವೇಳೆ ಮಳೆ ಬಂದ ಕಾರಣ ಅಹವಾಲು ಸ್ವೀಕಾರ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ಯಡಿಯೂರಪ್ಪ ತೆರಳಿರುವ ಘಟನೆ ನಡೆದಿದೆ.
ಸಿಎಂ ಬರುವಿಕೆಗಾಗಿ ಬಿಸಿಲಲ್ಲಿ ಕಾಯ್ದು ಸುಸ್ತಾದ ನೆರೆ ಸಂತ್ರಸ್ತರು ತಮ್ಮ ಅಹವಾಲು ನೀಡಲು ಸಿಎಂ ಯಡಿಯೂರಪ್ಪ ಭಾಷಣ ಮುಗಿಯೋದನ್ನೇ ಎದುರು ನೋಡ್ತಿದ್ರು. ಆದರೆ ಬಿಎಸ್ವೈ ಭಾಷಣ ಮುಗಿಯುವ ಮೊದಲೇ ಮಳೆರಾಯನ ಅರ್ಭಟ ಪ್ರಾರಂಭವಾಗಿದ್ದರಿಂದ ಕಾರ್ಯಕ್ರಮ ಮೊಟಕುಗೊಳಿಸಿ ಹೊರಟೇ ಬಿಟ್ರು. ದೂರದ ಹಳ್ಳಿಗಳಿಂದ ಬಂದ ನಿರಾಶ್ರಿತರು ಮುಖ್ಯಮಂತ್ರಿಗಳಿಗೆ ತಮ್ಮ ಅಹವಾಲು ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ವರುಣನ ವಿರುದ್ಧ ಹಾಗೂ ಅಹವಾಲು ಕೇಳದೆ ಹೊರಟು ಹೋದ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2004 ರಲ್ಲೂ ಸಹ ನಮ್ಮ ಮನೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಈಗಲೂ ಆಗಿವೆ. ಆದರೆ, ನಮ್ಮ ಅಳಲು ಕೇಳದೆಯೇ ಸಿಎಂ ಹೋದರು. ಇನ್ನು ನಮ್ಮ ಅಹವಾಲು ನಾವು ಯಾರಿಗೆ ನೀಡುವುದು ಎಂದು ರೈತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೇ ತಮ್ಮನ್ನು ಸಿಎಂ ಕಾರ್ ಬಳಿ ಹೋಗದಂತೆ ತಡೆದ ಪೊಲೀಸರ ವಿರುದ್ಧವೂ ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.