ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧೀ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಕೇಳಿಬಂದಿರುವ ಆರೋಪ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ನಂತರ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಪ್ರತಿ ಪಕ್ಷದಿಂದ ತೀವ್ರ ಆಗ್ರಹ ಕೇಳಿ ಬಂದಿದೆ. ನಾಳೆ ಬೆಳಗ್ಗೆ ಕೈ ನಾಯಕರ ನಿಯೋಗ ರಾಜಭವನಕ್ಕೆ ತೆರಳಿ ಈಶ್ವರಪ್ಪ ವಜಾಗೆ ಆಗ್ರಹಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಮನವಿ ಸಲ್ಲಿಕೆ ಮಾಡಲಿದೆ. ಇನ್ನೊಂದೆಡೆ ನಾಳೆ ಮಧ್ಯಾಹ್ನ 12 ಗಂಟೆಗೆ ಯುವ ಕಾಂಗ್ರೆಸ್ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆ ರಾಜ್ಯ ಬಿಜೆಪಿ ಹಿರಿಯ ನಾಯಕರಾಗಿರುವ ಯಡಿಯೂರಪ್ಪ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಕಮೀಷನ್ ಆರೋಪದಿಂದ ನುಣುಚಿಕೊಳ್ಳಲು ಈಶ್ವರಪ್ಪ ಏನೇನೋ ಹೇಳಿಕೆ ನೀಡುತ್ತಿದ್ದಾರೆ : ಗುತ್ತಿಗೆದಾರ ಸಂತೋಷ್
ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದು, ಮಂಗಳೂರಿನ ಸಭೆಯಲ್ಲಿ ಬೊಮ್ಮಾಯಿ ಭಾಗಿಯಾಗಿದ್ದಾರೆ. ಇಬ್ಬರು ನಾಯಕರೂ ಬೆಂಗಳೂರಿನ ಹೊರಗಡೆ ಇದ್ದು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈಶ್ವರಪ್ಪ ವಿಚಾರದಲ್ಲಿ ಯಾವ ನಿಲುವು ಹೊಂದಬೇಕು ಎನ್ನುವ ಕುರಿತು ಬಿಎಸ್‌ವೈ ಜೊತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ಸ್ಪಷ್ಟೀಕರಣ?:
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಕುರಿತು ಹೈಕಮಾಂಡ್ ಗೆ ಸಚಿವ ಈಶ್ವರಪ್ಪ ಮಾಹಿತಿ ನೀಡುವ ಸಾಧ್ಯತೆ ಇದೆ.ಗುತ್ತಿಗೆದಾರರಿಂದ ಶೇ.40 ರ ಕಮಿಷನ್ ಪಡೆದ ಆರೋಪ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಕುರಿತು ಮಾಹಿತಿ ನೀಡಿ ಸಮಗ್ರ ವಿವರ ನೀಡಲಿದ್ದಾರೆ. ಘಟನೆಯಲ್ಲಿ ತಮ್ಮ ಪಾತ್ರವೇನಿಲ್ಲ ಎಂದು ವಿವರಣೆ ನೀಡಲಿದ್ದಾರೆ ಎಂದು ಈಶ್ವರಪ್ಪ ಆಪ್ತ ಮೂಲಗಳು ತಿಳಿಸಿವೆ.