ಬೆಳಗಾವಿ: ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವಳಿಕೆ ತಜ್ಞ ಡಾ. ಮಹಾಂತೇಶ ಶೆಟ್ಟೆಪ್ಪನವರ ಜತೆ ವರ್ಚುವಲ್ ಸಭೆ ಮೂಲಕ ಚರ್ಚೆ ನಡೆಸಿದರು.
![CM collected corona information by Gokak doctor](https://etvbharatimages.akamaized.net/etvbharat/prod-images/kn-bgm-04-15-cm-virtual-meeting-ka10029_15052021220838_1505f_1621096718_135.jpg)
ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದರ ನಿಯಂತ್ರಣ ಹಾಗೂ ಚಿಕಿತ್ಸೆಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ. ಮಹಾಂತೇಶ ಶೆಟ್ಟೆಪ್ಪನವರ, "ನೆರೆಯ ಮಹಾರಾಷ್ಟ್ರದಲ್ಲಿ ಸೋಂಕು ಜಾಸ್ತಿಯಿದೆ. ಅಲ್ಲಿಂದ ವಲಸಿಗರು ಹಾಗೂ ಸೋಂಕಿತರ ಆಗಮನದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಸೋಂಕು ಕಂಡುಬಂದಿದೆ. ಆದ್ದರಿಂದ ತಳಮಟ್ಟದ ಆರೋಗ್ಯ ಕಾರ್ಯಕರ್ತರ ಮೂಲಕ ಸೋಂಕಿತರು ಹಾಗೂ ಸಂಪರ್ಕಿತರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದರು.
ಗ್ರಾಮೀಣ ಮಟ್ಟದಲ್ಲಿ ಆಯುಷ್ ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಜನರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ. ಇದಲ್ಲದೇ ಟೆಲಿಮೆಡಿಸಿನ್ ಮೂಲಕ ಕೂಡ ಚಿಕಿತ್ಸೆ ನೀಡಲಾಗುತ್ತಿದೆ. ಲಕ್ಷಣರಹಿತ ಸೋಂಕಿತರು ಕಂಡುಬಂದಾಗ ಅವರ ಮನೆ ಮನೆಗೆ ತೆರಳಿ ನಿಗದಿತ ಔಷಧೋಪಚಾರ ಒದಗಿಸಲಾಗುತ್ತಿದೆ ಎಂದು ಡಾ. ಶೆಟ್ಟೆಪ್ಪನವರ ತಿಳಿಸಿದರು.
ತಾಲೂಕು-ಜಿಲ್ಲಾ ಆಸ್ಪತ್ರೆ ಸಮನ್ವಯತೆ ಹೇಗೆ?: ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು, ಕೋವಿಡ್ ನಿರ್ವಹಣೆ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆ ನಡುವೆ ಯಾವ ರೀತಿ ಸಮನ್ವಯತೆ ಸಾಧಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಾ. ಶೆಟ್ಟೆಪ್ಪನವರ, ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸೋಂಕಿತರ ಪತ್ತೆ ಹಾಗೂ ಚಿಕಿತ್ಸೆ ನಡೆಯುತ್ತಿದ್ದು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ ನಡುವೆ ಸಮನ್ವಯತೆ ಕೊರತೆ ಕಂಡುಬಂದಿಲ್ಲ. ಡಿಹೆಚ್ಒ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಆರ್.ಸಿ.ಹೆಚ್. ಸೇರಿದಂತೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರುವುದರಿಂದ ಯಾವುದೇ ತೊಂದರೆಯಾಗಿಲ್ಲ. ಕೆಲ ಸಂದರ್ಭಗಳಲ್ಲಿ ಔಷಧಿ ಪೂರೈಕೆ ವಿಳಂಬವಾಗಿದ್ದರೂ ತೊಂದರೆಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಡಾಕ್ಟರ್ ಆರೋಗ್ಯ ವಿಚಾರಿಸಿದ ಸಿಎಂ: ಸ್ವತಃ ಕೋವಿಡ್ ಸೋಂಕಿಗೆ ತುತ್ತಾಗಿ ಇತ್ತೀಚೆಗಷ್ಟೇ ಚೇತರಿಸಿಕೊಂಡು ಪುನಃ ಕರ್ತವ್ಯಕ್ಕೆ ಹಾಜರಾಗಿರುವ ಗೋಕಾಕ ತಾಲೂಕು ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಮಹಾಂತೇಶ ಶೆಟ್ಟೆಪ್ಪನವರ ಆರೋಗ್ಯವನ್ನು ಮುಖ್ಯಮಂತ್ರಿಗಳು ವಿಚಾರಿಸಿದರು.
ಕಳೆದ ಒಂದು ವರ್ಷದಿಂದ ಕೋವಿಡ್ ಕರ್ತವ್ಯದಲ್ಲಿ ನಿರತರಾಗಿರುವ ನೀವು ಕೂಡ ಸೋಂಕಿಗೆ ತುತ್ತಾಗಿದ್ದೀರಿ. ಈಗ ಆರೋಗ್ಯ ಹೇಗಿದೆ ಎಂದು ಕೇಳಿದರು. ಇಪ್ಪತ್ತು ದಿನಗಳ ಹಿಂದಷ್ಟೇ ಸೋಂಕು ದೃಢಪಟ್ಟಿತ್ತು. ಅದರಿಂದ ಚೇತರಿಸಿಕೊಂಡು ಎರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ಡಾ. ಶೆಟ್ಟೆಪ್ಪನವರ ಉತ್ತರಿಸಿದರು. ಕಳೆದ ನಾಲ್ಕು ವರ್ಷಗಳಿಂದ ಗೋಕಾಕ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ವೈದ್ಯಕೀಯ ಸಿಬ್ಬಂದಿ ಅಮೂಲ್ಯ ಆಸ್ತಿ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಪಾಯವನ್ನು ಲೆಕ್ಕಿಸದೇ ಕಾರ್ಯದ ಒತ್ತಡದ ಮಧ್ಯೆಯೂ ನಿರಂತರವಾಗಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್ ಸೇರಿದಂತೆ ಎಲ್ಲ ವೈದ್ಯಕೀಯ ಸಿಬ್ಬಂದಿ ನಮ್ಮ ಅಮೂಲ್ಯ ಆಸ್ತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು. ಇಂತಹ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸರ್ಕಾರ ಬದ್ಧವಿದೆ. ಸೋಂಕು ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮಾನವೀಯತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುವ ಮೂಲಕ ಸೋಂಕಿತರು ಹಾಗೂ ತಮ್ಮ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.