ಬೆಳಗಾವಿ: ರಮೇಶ್ ಜಾರಕಿಹೊಳಿ ಸುಮಾರು 25 ವರ್ಷ ಶಾಸಕರಾಗಿದ್ದರೂ ಎರಡು ವರ್ಷ ಅಷ್ಟೇ ಮಂತ್ರಿಯಾಗಿದ್ದರು. ಉಳಿದ 20 ವರ್ಷ ಅವರಿವರನ್ನು ಎಂಎಲ್ಎ ಮಾಡುವುದರಲ್ಲಿಯೇ ತಮ್ಮ ಕಾಲ ಕಳೆದಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ರಮೇಶ್ ಜಾರಕಿಹೊಳಿಯನ್ನು ಹಾಡಿ ಹೊಗಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ ಮನ್ನೋಳ್ಕರ್ ಪರವಾಗಿ ರೋಡ್ ಶೋ ನಡೆಸಿದ ಬಳಿಕ ಬಹಿರಂಗ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ಬಾರಿ ಗ್ರಾಮೀಣ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಭಾರತೀಯ ಜನತಾ ಪಕ್ಷದ ಕಮಲ ಮತ್ತೊಮ್ಮೆ ಅರಳುವುದು ನಿಶ್ಚಿತ. ಇಟ್ಟ ಬಾಣದ ಗುರಿ ಹೇಗೆ ತಪ್ಪುವುದಿಲ್ಲವೋ, ಅದೇ ರೀತಿ ರಮೇಶ್ ಜಾರಕಿಹೊಳಿ ಶಪಥ ಮಾಡಿರುವ ಚುನಾವಣೆಯಲ್ಲಿ ಗೆಲುವು ತಪ್ಪುವುದಿಲ್ಲ. ರಮೇಶ್ ಅವರದ್ದು ಬಹಳ ವಿಚಿತ್ರವಾದ ರಾಜಕೀಯ ಜೀವನ. ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಅಧಿಕಾರದಲ್ಲಿ ಇದ್ದಿದ್ದು ಬಹಳ ಕಡಿಮೆಯೇ ಎಂದರು.
ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡು ರಮೇಶ್ ಜಾರಕಿಹೊಳಿ ಎಂದಿಗೂ ರಾಜಕಾರಣ ಮಾಡಿದವರಲ್ಲ. ಕೆಲವರು ಅಧಿಕಾರದ ಬಲದಿಂದ ನಾಯಕರಾಗುತ್ತಾರೆ. ಆದರೆ, ಕೆಲವರು ಜನರ ಪ್ರೀತಿ, ವಿಶ್ವಾಸ ಗಳಿಸಿ ನಾಯಕರಾಗುತ್ತಾರೆ. ಇವತ್ತು ರಮೇಶ್ ಜಾರಕಿಹೊಳಿ ಅವರು ಜನರ ಪ್ರೀತಿ, ವಿಶ್ವಾಸ ಗಳಿಸಿ ನಾಯಕರಾಗಿದ್ದಾರೆಯೇ ಹೊರತು ಅಧಿಕಾರದ ಬಲದಿಂದಲ್ಲ. ಅಷ್ಟೇ ಅಲ್ಲದೇ, ಅವರು ಜನರ ರಾಜಕಾರಣ ಮಾಡಿದ್ದು, ಅಧಿಕಾರದ ರಾಜಕಾರಣ ಎಂದಿಗೂ ಮಾಡಿಲ್ಲ ಎಂದು ಹೊಗಳಿದರು.
"ರಮೇಶ್ ಜಾರಕಿಹೊಳಿ ತಮ್ಮ ಗೋಕಾಕ್ ಕ್ಷೇತ್ರವನ್ನು ಬಿಟ್ಟು ಅತೀ ಹೆಚ್ಚು ಸಮಯವನ್ನು ಈ ಕ್ಷೇತ್ರದಲ್ಲಿ ಕಳೆಯುತ್ತಿದ್ದಾರೆ. ಹೀಗಾಗಿ, ಇಲ್ಲಿ ಸೇರಿರುವ ಜನರು ಅವರಿಗೆ ಒಂದು ಸಂದೇಶ ಕೊಡಬೇಕು. ಸಾಹುಕಾರ ನೀವು ಏನೂ ಚಿಂತಿ ಮಾಡಬ್ಯಾಡರಿ, ನಾವು ಪ್ರತಿ ಮನೆ ಮನೆಗೆ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ತಿಳಿಸಿ ನಾಗೇಶ್ ಮನ್ನೋಳ್ಕರ್ ಅವರನ್ನು ಗೆಲ್ಲಿಸುತ್ತೇವೆ" ಎಂಬ ಮಾತು ಹೇಳಬೇಕೆಂದು ಕೋರಿದರು.
ಐದು ವರ್ಷದಲ್ಲಿ ನಮ್ಮ ಸರ್ಕಾರ ಕೇವಲ ಮೂರು ವರ್ಷ ಮಾತ್ರ ಆಡಳಿತ ಮಾಡಿದೆ. ಒಂದು ವರ್ಷ ಸಮ್ಮಿಶ್ರ ಸರ್ಕಾರ, ಮತ್ತೊಂದು ವರ್ಷ ಕೋವಿಡ್ ಇತ್ತು. ಈ ಮೂರು ವರ್ಷದ ಆಡಳಿತದಲ್ಲಿ ಎಂತಹ ಕಷ್ಟ ಬರಲಿ ಅದನ್ನು ಧೈರ್ಯವಾಗಿ ಎದುರಿಸಿದ್ದೇವೆ. ಮೊದಲು ಕೋವಿಡ್ ಬಂತು ಅದನ್ನು ಯಶಸ್ವಿಯಾಗಿ ಎದುರಿಸಿದ್ದೇವು. ನರೇಂದ್ರ ಮೋದಿಯವರು ನಮಗೆ ಲಸಿಕೆ ಕಳಿಸಿದರು. ಹೀಗಾಗಿ, ಇವತ್ತು ಕೋವಿಡ್ ಮುಕ್ತ ಕರ್ನಾಟಕ ಮತ್ತು ಭಾರತ ಆಗಿದೆ ಎಂದರು.
ಇದನ್ನೂ ಓದಿ : ಲಿಂಗಾಯತರ ಮತ ಸೆಳೆಯಲು ಬಿಎಸ್ವೈ ಪ್ಲಾನ್: ವೀರಶೈವ ಸಮಾಜದ ಸ್ನೇಹಮಿಲನ
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ 20 ಲಕ್ಷಕ್ಕೂ ಹೆಚ್ಚು ಮನೆಗಳು ಬಿದ್ದಿದ್ದವು. ಅದರಲ್ಲಿ 10 ಲಕ್ಷ ಮನೆಗಳಿಗೆ ಮೊದಲ ಹಂತದಲ್ಲಿ ತಲಾ 5 ಲಕ್ಷ ರೂ. ಪರಿಹಾರ ಧನವನ್ನು ನಮ್ಮ ನಾಯಕರಾದ ಯಡಿಯೂರಪ್ಪ ಅವರು ನೀಡಿದರು. ನಾನು ಮುಖ್ಯಮಂತ್ರಿ ಆದ ಬಳಿಕ 10 ಲಕ್ಷಕ್ಕೂ ಹೆಚ್ಚು ಮನೆಗಳಿಗೆ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಮನೆಗಳು ಬಿದ್ದಾಗಲೂ ಕೂಡ ಬಡ ಜನರು ಸಂಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯ ಮಾಡಬೇಕು ಎಂಬ ದೃಷ್ಟಿಯಿಂದ ಕೆಲವೇ ಕೆಲವು ದಿನಗಳಲ್ಲಿ 5 ಲಕ್ಷ ರೂ. ಪರಿಹಾರ ವಿತರಿಸುವ ಕೆಲಸ ಮಾಡಿದ್ದೇವೆ ಎಂದರು.
ರೈತರ ಬೆಳೆ ಹಾನಿ ಆದಾಗ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುವ ವೇಳೆ ರೈತರು ನಷ್ಟದಲ್ಲಿದ್ದಾರೆ, ಏನು ಪರಿಹಾರ ಕೊಟ್ಟಿದ್ದಿರಿ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಆಗ ನಾನು ಹೇಳಿದ್ದೆ, ಈ ವರ್ಷದ ಪರಿಹಾರವನ್ನು ಮುಂದಿನ ವರ್ಷ ನೀವು ಕೊಟ್ಟ ಹಾಗೆ ನಾನು ಕೊಡುವುದಿಲ್ಲ, ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡುತ್ತೇನೆ ಎಂದು ಉತ್ತರ ಕೊಟ್ಟಿದ್ದೆ. ಅದೇ ಪ್ರಕಾರ ಕೇಂದ್ರ ಸರ್ಕಾರ ಒಣ ಬೇಸಾಯಕ್ಕೆ 6,300 ರೂ. ನೀಡಿದರೆ ನಾವು 13,200 ರೂ., ನೀರಾವರಿ ಭೂಮಿಗಳಿಗೆ ಕೇಂದ್ರ 15 ಸಾವಿರ ರೂ. ನೀಡಿದರೆ ನಾವು 25 ಸಾವಿರ ರೂ. ನೀಡಿದ್ದೇವೆ. ತೋಟಗಾರಿಕೆ ಭೂಮಿಗಳಿಗೆ ಕೇಂದ್ರ 18 ಸಾವಿರ ನೀಡಿದರೆ ನಾವು 28 ಸಾವಿರ ರೂ. ಪರಿಹಾರ ನೀಡಿದ್ದೇವೆ. ಒಂದು ತಿಂಗಳಲ್ಲಿ ಎರಡೂವರೇ ಸಾವಿರ ಕೋಟಿ ರೂ. ಪರಿಹಾರ ರೈತರಿಗೆ ವಿತರಿಸಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ : ಎರಡು ಕ್ಷೇತ್ರದಲ್ಲಿ ಸಿಎಂ ರೋಡ್ ಶೋ: ಧಾರವಾಡ ಗ್ರಾಮೀಣ, ಪಶ್ಚಿಮದಲ್ಲಿ ಭರ್ಜರಿ ಮತಬೇಟೆ
ಬೆಳಗಾವಿ ಅಭಿವೃದ್ಧಿ ಪರ ಜಿಲ್ಲೆ. ಇಲ್ಲಿ ಜಾತಿ ರಾಜಕಾರಣ, ಹಣದ ರಾಜಕಾರಣ ನಡೆಯುವುದಿಲ್ಲ. ಬೆಳಗಾವಿ ಗಂಡು ಮೆಟ್ಟಿದ ನಾಡು. ಚೆನ್ನಮ್ಮ, ರಾಯಣ್ಣನ ನಾಡು. ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ ಚುನಾವಣೆ ಮುಗಿಯುವವರೆಗೂ ಮಾತ್ರ ಆಮೇಲೆ ಗಳಗಂಟಿ ಆಗುತ್ತದೆ ಎಂದರು.
ಕಳೆದ ನಾಲ್ಕು ವರ್ಷದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 54 ಲಕ್ಷ ರೈತರಿಗೆ 16 ಸಾವಿರ ಕೋಟಿ ರೂ.ಅನುದಾನ ನೀಡಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಸಾಮಾಜಿಕ ನ್ಯಾಯ ಅಂತ ಹೇಳಿ ಕಾಂಗ್ರೆಸ್ನವರು ಮಾತ್ರ ಮುಂದೆ ಹೋದರು. ದೀನ ದಲಿತರನ್ನು ಅಲ್ಲಿಯೇ ಇಟ್ಟರು. ಈ ಬಾರಿ ಬಿಜೆಪಿ ಸರ್ಕಾರ ಇದೆ. ಸಿದ್ದರಾಮಯ್ಯ ಒಳಮೀಸಲಾತಿ ವಿಷಯ ಬಂದಾಗ ಮಾತನಾಡದೇ ಓಡಿ ಹೋದರು. ಆದರೆ, ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನಾನು ಜೇನು ಗೂಡಿಗೆ ಕೈ ಹಾಕಿ ಅವರಿಗೆ ಜೇನು ತುಪ್ಪ ನೀಡಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಸಂಜಯ ಪಾಟೀಲ, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಅಭ್ಯರ್ಥಿ ನಾಗೇಶ್ ಮನ್ನೋಳ್ಕರ್ ಸೇರಿ ಮತ್ತಿತರರು ಇದ್ದರು.