ಬೆಳಗಾವಿ: ವಂದೇ ಭಾರತ್, ಶತಾಬ್ದಿ ಸೂಪರ್‌ಫಾಸ್ಟ್ ರೈಲುಗಳ ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ ಸೋಮಣ್ಣ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಮರಿತಿಬ್ಬೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ವಂದೇ ಭಾರತ್ ಹಾಗೂ ಶತಾಬ್ದಿ ಸೂಪರ್ ಫಾಸ್ಟ್ ರೈಲುಗಳು ವೇಳಾಪಟ್ಟಿ ಬದಲಾವಣೆ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ರೈಲ್ವೆ ಮಂತ್ರಾಲಯವನ್ನು ಪತ್ರ ಮುಖೇನ ಕೋರಲಾಗಿದೆ ಎಂದು ಹೇಳಿದರು.
ರೈಲ್ವೆ ಅಧಿಕಾರಿಗಳು ಇದು ಕಷ್ಟ ಅನ್ನುತ್ತಿದ್ದಾರೆ. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕೇಂದ್ರ ರೈಲ್ವೆ ಮಂತ್ರಿಗಳೊಂದಿಗೆ ಚರ್ಚಿಸಿ ಜನತೆಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಮಂಡ್ಯದಲ್ಲಿ ಈ ಎರಡೂ ರೈಲುಗಳಿಗೂ ಸಹ ನಿಲುಗಡೆ ಒದಗಿಸುವ ಕುರಿತ ಸದಸ್ಯರ ಕೋರಿಕೆಯನ್ನು ರೈಲ್ವೆ ಮಂತ್ರಾಲಯಕ್ಕೆ ಅಗತ್ಯ ಕ್ರಮಕೈಗೊಳ್ಳುವಂತ ಪತ್ರ ಮುಖೇನ ತಿಳಿಸಲಾಗಿದೆ ಎಂದು ತಿಳಿಸಿದರು.
ವಂದೇ ಭಾರತ್ ರೈಲು ಸೇವೆಯು ಆರಂಭವಾದ ನಂತರ ಶತಾಬ್ದಿ ಹಾಗೂ ವಂದೇ ಭಾರತ್ ಎರಡು ರೈಲುಗಳಲ್ಲೂ ಬಹುತೇಕ ಪೂರ್ಣಪ್ರಮಾಣದಲ್ಲಿ ಪಯಾಣಿಕರು ಪ್ರಯಾಣಿಸುತ್ತಿರುವುದರಿಂದ ಯಾವುದೇ ಆರ್ಥಿಕ ನಷ್ಟ ಉಂಟಾಗಿರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿರುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಅನುದಾನ ಬಿಡುಗಡೆಗೆ ಕೇಂದ್ರಕ್ಕೆ ಪ್ರಸ್ತಾವ: 2019-20 ರಿಂದ 2021-22ರವರೆಗೆ ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಒಟ್ಟು 3,85,771 ಮನೆಗಳನ್ನು ಮಂಜೂರು ಮಾಡಲಾಗಿದೆ. ರಾಜೀವಗಾಂಧೀ ವಸತಿ ನಿಗಮದಿಂದ 11,739 ಹಕ್ಕು ಪತ್ರಗಳನ್ನು ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ 61126 ಪತ್ರಗಳನ್ನು ನೀಡಲಾಗಿದೆ. ಆಗಸ್ಟ್ 2019ರಿಂದ ನವೆಂಬರ್ ಅಂತ್ಯದವರೆಗೆ 6,914,85 ಕೋಟಿ ಅನುದಾನ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ನಗರ ಯೋಜನೆಯಡಿ ಎಎಚ್ಪಿ ಘಟಕದಡಿ ಕೇಂದ್ರ ಸರ್ಕಾರವು ಅಕ್ಟೋಬರನಲ್ಲಿ 464 ಕೋಟಿ ರೂ. ಬಿಡುಗಡೆ ಮಾಡಿದೆ. ಫಲಾನುಭವಿ ನಿರ್ಮಿತ ಮನೆಗಳಿಗೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಈಗಾಗಲೇ ಉಪಯೋಗ ಪ್ರಮಾಣಪತ್ರವನ್ನು ಸಲ್ಲಿಸಿ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸದಸ್ಯ ಸಲೀಂ ಅಹಮದ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವ ವಿ.ಸೋಮಣ್ಣ ಉತ್ತರಿಸಿದರು.
ಸರ್ಕಾರದಿಂದ ಅನುಮೋದನೆ: ವಿವಿಧ ವಸತಿ ಯೋಜನೆಗಳಡಿ ಮನೆ ಪ್ರಾರಂಭ ಮಾಡಿಕೊಳ್ಳದೇ ರದ್ದಾದ ಮನೆಗಳ ಫಲಾನುಭವಿಗಳನ್ನು 2021-22ನೇ ಸಾಲಿನಲ್ಲಿ ನೀಡಲಾಗಿರುವ ಹೊಸ ಮನೆಗಳ ಗುರಿಯಲ್ಲಿ ಮರು ಆಯ್ಕೆಗೆ ನಿಯಮಾನುಸಾರ ಪರಿಶೀಲಿಸಲು ಸರ್ಕಾರವು ಅನುಮೋದನೆ ನೀಡಿದೆ ಎಂದರು.
ದೂರು ಸಂಬಂಧ ಬ್ಲಾಕ್ ಆಗಿರುವ ಮನೆಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ಅವರು ಮನೆಗಳ ಭೌತಿಕ ತಪಾಸಣೆ ನಡೆಸಿ ಅರ್ಹವೆಂದು ಶಿಫಾರಸ್ಸು ಮಾಡಿದ್ದಲ್ಲಿ ನಿಯಮಾನುಸಾರ ಪರಿಗಣಿಸಿ ಬ್ಲಾಕ್ ತೆರವುಗೊಳಿಸಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ, ಉಳಿದಂತೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಎಸ್ಇಸಿಸಿ ಸಮೀಕ್ಷೆಯಲ್ಲಿ ಹೆಸರು ಬದಲಾವಣೆಯಿಂದ ಬ್ಲಾಕ್ ಆಗಿರುವ ಮನೆಗಳ ಸಂಬಂಧ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ವಿ ಸೋಮಣ್ಣ ತಿಳಿಸಿದರು.
ಇದನ್ನೂ ಓದಿ:ಕೋವಿಡ್ ಕುರಿತು ಕೇಂದ್ರದ ಎಚ್ಚರಿಕೆ.. ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದ ಸಿಎಂ