ಬೆಳಗಾವಿ: ಸಂಪುಟ ವಿಸ್ತರಣೆಗೆ ಪಕ್ಷದ ನಿಷ್ಠರನ್ನು ಕಡೆಗಣಿಸಿ ಪ್ರಭಾವಿಗಳಿಗೆ ಮಣೆ ಹಾಕಿದ ಆರೋಪಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸ್ವಪಕ್ಷಿಯರೇ ಬಂಡೆದಿದ್ದಾರೆ. ನಾಳೆ ಬೆಳಗಾವಿಗೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅಸಮಾಧಾನಿತ ಶಾಸಕರು ಸಮಯವನ್ನೂ ಕೇಳಿದ್ದಾರೆ. 15ಕ್ಕೂ ಅಧಿಕ ಶಾಸಕರು ಒಟ್ಟಾಗಿ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಶಾ ಅವರನ್ನು ಭೇಟಿ ಮಾಡಲಿದ್ದು, ಅತೃಪ್ತರ ನೋವಿಗೆ ಶಾ ಹಚ್ಚುವ ಮುಲಾಮು ಎಂಥದ್ದು ಎಂಬುದೀಗ ಕುತೂಹಲ ಮೂಡಿಸಿದೆ.
ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಅಮಿತ್ ಶಾ ಬೆಳಗಾವಿಗೆ ಬರುತ್ತಿದ್ದಾರೆ. ಶಾ ರಾಜ್ಯಕ್ಕೆ ಆಗಮಿಸುವ ಮೊದಲೇ ಸಂಪುಟ ವಿಸ್ತರಣೆಯಾಗಿದ್ದು, ಅದರಲ್ಲಿ ಪಕ್ಷ ನಿಷ್ಠರನ್ನು ಕಡೆಗಣಿಸಲಾಗಿದೆ. ಪ್ರಭಾವಿಗಳಿಗೆ ಹಾಗೂ ಬ್ಲ್ಯಾಕ್ ಮೇಲ್ ಮಾಡುವವರನ್ನೇ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಶಾಸಕರು ಬಹಿರಂಗವಾಗಿಯೇ ಸಿಎಂ ವಿರುದ್ಧ ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಘಟಕ ನೀಡಿರುವ ಖಡಕ್ ಎಚ್ಚರದ ಮಧ್ಯೆಯೂ ಮುಖ್ಯಮಂತ್ರಿಗಳ ಸಿಡಿ ವಿಚಾರದ ಪ್ರಸ್ತಾಪ ಮಾತ್ರ ಇನ್ನೂ ನಿಂತಿಲ್ಲ. ಹೀಗಾಗಿ, ಅತೃಪ್ತರು ಅಮಿತ್ ಶಾ ಮುಂದೆ ಅಳಲು ತೋಡಿಕೊಳ್ಳಲಿದ್ದಾರೆ.
ಇದನ್ನೂ ಓದಿ...ಕೇಂದ್ರ, ರಾಜ್ಯ ರಾಜಕಾರಣದ ಭೂಪಟದಲ್ಲಿ ಬೆಳಗಾವಿಗೇ ಸಿಂಹಪಾಲು
ಶಾ ಭೇಟಿ ಆಗುವವರ್ಯಾರು?: ಸಂಪುಟದಲ್ಲಿ ಅವಕಾಶ ಸಿಗಬಹುದೆಂಬ ಆಶಾಭಾವನೆ ಹೊಂದಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮೈತ್ರಿ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಥಣಿ ಶಾಸಕ ಮಹೇಶ ಕುಮಟಳ್ಳಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಧಾರವಾಡ ಶಾಸಕ ಅರವಿಂದ ಬೆಲ್ಲದ ಹಾಗೂ ಪರಿಷತ್ ಸದಸ್ಯ ಎಚ್.ವಿಶ್ವನಾಥ ಸೇರಿದಂತೆ ಇತರ ಶಾಸಕರು ಶಾರನ್ನು ಭೇಟಿ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಅತೃಪ್ತರಿಗೆ ಶಾ ಮುಲಾಮು!: ಬದಲಾದ ರಾಜಕೀಯ ವಿದ್ಯಮಾನಗಳಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ರಚನೆಯಾಗಿದ್ದೇಗೆ ಎಂಬುವುದು ಬಿಜೆಪಿ ಹೈಕಮಾಂಡ್ ನಾಯಕರಿಗೂ ಗೊತ್ತಿದೆ. ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದಿರುವ ಆರ್ಆರ್ ನಗರ ಶಾಸಕ ಮುನಿರತ್ನ ಹಾಗೂ ಅಥಣಿ ಶಾಸಕ ಮಹೇಶ ಕುಮಟಳ್ಳಿಗೆ ಇನ್ನೂ ಸಚಿವ ಸ್ಥಾನ ನೀಡಿಲ್ಲ. ಮೂಲ ಬಿಜೆಪಿಗರಿಗೆ ಸಂಪುಟದಲ್ಲಿ ಅವಕಾಶ ಸಿಗುವುದು ಸದ್ಯಕ್ಕೆ ದೂರದ ಮಾತು.
ನಾಳೆ ಅತೃಪ್ತರ ಭೇಟಿ ಮಾಡಿ ಸಂಪುಟದಲ್ಲಿ ನಮ್ಮನ್ನು ಪರಿಗಣಿಸಿಲ್ಲ ಎಂದು ದೂರು ನೀಡಿ ನೋವು ತೋಡಿಕೊಂಡ್ರೆ ಶಾ ಹಚ್ಚುವ ಮುಲಾಮು ಎಂಥದ್ದು ಎಂಬುವುದು ಕುತೂಹಲ ಮೂಡಿಸಿದೆ. ಅಲ್ಲದೇ, ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ, ಆಡಳಿತದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರರ ಹಸ್ತಕ್ಷೇಪ ಕುರಿತಾಗಿಯೂ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಶಾ ಅವರು ಸ್ಥಳದಲ್ಲೇ ನಿವಾರಿಸುವ ಸಾಧ್ಯತೆ ಇದೆ. ಇನ್ನೂ ಹೆಚ್ಚಿನ ಅಸಮಾಧಾನಿತರಿಗೆ ನಿಗಮದಲ್ಲಿ ಅಥವಾ ಸಂಘಟನೆಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ. ತೀರಾ ಹಠಕ್ಕೆ ಬಿದ್ದವರಿಗೆ ಸಂಪುಟ ಪುನಾರಚನೆ ವೇಳೆ ಪರಿಗಣಿಸಲಾಗುವುದು. ಸಾರ್ವಜನಿಕವಾಗಿ ಹೇಳಿಕೆ ನೀಡಿ ಪಕ್ಷದ ವರ್ಚಿಸ್ಸಿಗೆ ಧಕ್ಕೆ ತರದಂತೆ ಶಾ ಖಡಕ್ ವಾರ್ನಿಂಗ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.