ಬೆಳಗಾವಿ: ಬಿಜೆಪಿ ಜನಸೇವಕ ಸಮಾವೇಶ ರದ್ದುಪಡಿಸಿ, ಇಲ್ಲವೇ ಕೋವಿಡ್ ಮಾರ್ಗಸೂಚಿಗಳನ್ನು ಹಿಂಪಡೆಯಿರಿ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ್ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಯಂತೆ ದೇವಸ್ಥಾನ ಪ್ರವೇಶ, ಜಾತ್ರೆ ರದ್ದುಗೊಳಿಸಲಾಗಿದೆ. ಕಳೆದ 10 ತಿಂಗಳಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನೂ ಬಂದ್ ಮಾಡಲಾಗಿದೆ. ಜ.17ರಂದು ನಡೆಯುವ ಕಾರ್ಯಕ್ರಮಕ್ಕೆ ಮೂರು ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ರಾಜಕಾರಣಿಗಳಿಗೆ ಒಂದು ಕಾನೂನು, ಜನಸಾಮಾನ್ಯರಿಗೆ ಒಂದು ಕಾನೂನಾ ಎಂದು ಪ್ರಶ್ನಿಸಿದ್ದಾರೆ.
ಜನಸೇವಕ ಸಮಾವೇಶ ರದ್ದುಗೊಳಿಸಿ, ಇಲ್ಲವಾದ್ರೆ ಕೋವಿಡ್ ಮಾರ್ಗಸೂಚಿ ಹಿಂಪಡೆಯಿರಿ. ಈ ಕೆಲಸ ಆಗದಿದ್ರೆ ಸರ್ಕಾರದ ವಿರುದ್ಧ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಓದಿ: ಯಡಿಯೂರಪ್ಪನವರ ಸಿಡಿ ಡಿಕೆಶಿ ಬಳಿ ಇದೆ: ಮತ್ತೊಂದು ಬಾಂಬ್ ಸಿಡಿಸಿದ ಯತ್ನಾಳ್
ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜ.17 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜನಸೇವಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ಇದಕ್ಕಾಗಿ ಸುಮಾರು ಮೂರು ಲಕ್ಷ ಜನರನ್ನು ಸೇರಿಸಲು ಬಿಜೆಪಿ ನಿರ್ಧರಿಸಿದೆ. ಬೆಳಗಾವಿಯಲ್ಲೇ ಬೀಡು ಬಿಟ್ಟಿರುವ ಸಚಿವ ರಮೇಶ್ ಜಾರಕಿಹೊಳಿ, ಜನರನ್ನು ಕರೆತರಲು ಎಲ್ಲ ಕಡೆಯೂ ವಾಹನದ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗ್ತಿದೆ.