ಬೆಳಗಾವಿ: ಪಂಚಮಸಾಲಿ ಸಮಾಜಕ್ಕಿಂದು ಸರ್ಕಾರ 2ಎ ಮೀಸಲಾತಿ ನೀಡುತ್ತಾ? ಎನ್ನುವ ಕುತೂಹಲ ಮೂಡಿದ್ದು, ಇಂದಿನ ಸಚಿವ ಸಂಪುಟ ಸಭೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಹೌದು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಮೂರು ದಶಕಗಳಿಂದ ಪ್ರತಿಭಟನೆ ನಡೆಸುತ್ತ ಬಂದಿದ್ದು, ಕಳೆದ ಮೂರು ವರ್ಷಗಳಿಂದ ಪ್ರತಿಭಟನೆ ಜೋರಾಗಿದೆ. ಸರ್ಕಾರ ಸಹ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವುದಾಗಿ ಅನೇಕ ಬಾರಿ ಗಡುವು ನೀಡಿದ್ದು, ಇಂದು ನಡೆಯಲಿರುವ ಸಚಿವ ಸಂಪುಟ ಸಭೆಗಾಗಿ ಸಮಾಜದ ಮುಖಂಡರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಇದನ್ನೂ ಓದಿ: ಮೀಸಲಾತಿ ವಿಚಾರವಾಗಿ ಸಿಎಂ ಆಣೆ ಮಾಡಿದ್ದಾರೆ: ಯತ್ನಾಳ್
ಕಳೆದ ಡಿಸೆಂಬರ್ 19 ರಂದು ನಡೆದ ಪಂಚ ವಿರಾಟ್ ಸಮಾವೇಶದಲ್ಲಿ ಸಮಾಜಕ್ಕೆ ಸರ್ಕಾರ 29 ರಂದು 2ಎ ಮೀಸಲಾತಿ ನೀಡುತ್ತದೆ ಎಂದು ಯತ್ನಾಳ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮೊಟಕುಗೊಳಿಸಿದ್ದರು. ಹೀಗಾಗಿ, ಇವತ್ತು ಸಂಜೆ ಐದು ಗಂಟೆಗೆ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ವಿಚಾರದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಪಂಚಮಸಾಲಿ ಸಮಾಜದ ಪಂಚ ವಿರಾಟ್ ಸಮಾವೇಶ.. ಕುಂದಾನಗರಿಯಲ್ಲಿ ಜನಸಾಗರ
ಪಂಚಮಸಾಲಿ ಮುಖಂಡರ ಸಭೆ: 29 ರಂದು ಪಂಚಮಸಾಲಿ ಸಮಾಜಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಮುಖ್ಯಮಂತ್ರಿ ಅವರು ಮಾತು ನೀಡಿದ್ದಾರೆ ಎಂಬ ಯತ್ನಾಳ್ ಹೇಳಿಕೆ ಹಿನ್ನೆಲೆ ಮತ್ತು ಸಂಜೆ ಐದು ಗಂಟೆಗೆ ಸಚಿವ ಸಂಪುಟ ಸಭೆ ಇರುವುದರಿಂದ ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಪಂಚಮಸಾಲಿ ಸಮಾಜ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವು ಪಂಚಮಸಾಲಿ ಮುಖಂಡರು ಗುಪ್ತ ಸಭೆ ನಡೆಸಿ, ಸರ್ಕಾರ ಯಾವ ನಿಲುವು ತೆಗೆದುಕೊಳ್ಳುತ್ತದೆಯೋ ಅದರ ಮೇಲೆ ನಮ್ಮ ನಿರ್ಧಾರ ಎಂದು ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪಂಚಮಸಾಲಿ ಸಮಾಜ ಸರ್ಕಾರದ ತೀರ್ಮಾನವನ್ನು ಕಾತರದಿಂದ ಕಾಯುತ್ತಿದೆ.
ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ಇಂದೇ ಘೋಷಿಸಿ.. ಇಲ್ಲವಾದರೆ ನೀವೇ ಬಿಜೆಪಿ ಕೊನೆ ಸಿಎಂ: ಶಾಸಕ ಯತ್ನಾಳ್