ಅಥಣಿ: ತಾಲೂಕಿನ ಸತ್ತಿ ಸೇರಿದಂತೆ 9 ಗ್ರಾಮಗಳಿಗೆ 45.39 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಲಕ್ಷ್ಮಣ ಸವದಿ ವಿವರಣೆ ನೀಡಿ, ಅಥಣಿ ತಾಲೂಕಿನ ಸತ್ತಿ ಗ್ರಾಮ ಸೇರಿದಂತೆ ಒಟ್ಟು 9 ಗ್ರಾಮಗಳಲ್ಲಿ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂಬ ಬೇಡಿಕೆ ಬಹು ದಿನಗಳಿಂದ ಇತ್ತು. ಈ ಬಗ್ಗೆ ಮುಖ್ಯಮಂತ್ರಿಗೆ ನಾವು ಮನವಿ ಮಾಡಿಕೊಂಡಿದ್ದೆವು. ಇಂದು ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದ ಆ ಭಾಗದ ಜನರ ಬೇಡಿಕೆ ಈಡೇರಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಸಿಎಂಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತ ಸುದ್ದಿ ಸತ್ಯಕ್ಕೆ ದೂರವಾದದ್ದು: ಸಿ.ಎಸ್.ಷಡಾಕ್ಷರಿ
ಕೇಂದ್ರದ 'ಜಲ ಜೀವನ್ ಮಿಷನ್' ಯೋಜನೆಯಡಿ 18.12 ಕೋಟಿ ರೂ., ಆರ್.ಐ.ಡಿ.ಎಫ್ (ನಬಾರ್ಡ್) ನಿಂದ 15.40 ಕೋಟಿ ರೂ. ಮತ್ತು ರಾಜ್ಯ ಸರ್ಕಾರದಿಂದ 11.87 ಕೋಟಿ ರೂ.ಗಳ ಅನುದಾನದೊಂದಿಗೆ ಈ ಯೋಜನೆ ಜಾರಿಗೊಳಿಸಲು ಸಂಪುಟ ಹಸಿರು ನಿಶಾನೆ ತೋರಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಜಾರಿಗೊಳಿಸಲಾಗುವ ಈ ಯೋಜನೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಅವರಖೋಡ, ನಾಗನೂರ ಪಿ.ಕೆ, ದೊಡವಾಡ, ನಂದೇಶ್ವರ, ಸವದಿ, ಹಲ್ಯಾಳ, ಹೂಲಗಬಾಳ, ಸಂಕೋನಟ್ಟಿ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಸವದಿ ತಿಳಿಸಿದ್ದಾರೆ.