ಅಥಣಿ(ಬೆಳಗಾವಿ): ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಅಥಣಿ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆಸಲಾಯಿತು. ಸಿಐಟಿಯು ಸಂಘಟನೆ ರಾಜ್ಯ ಹಾಗೂ ದೇಶಾದ್ಯಂತ ಹಲವಾರು ಪ್ರಮುಖ ಜನಪರ ಹೋರಾಟಗಳನ್ನು ರೂಪಿಸುತ್ತಾ ಮುಂಚೂಣಿಯಲ್ಲಿದೆ.
ದೀಪಕ್ ಶಿಂಧೆ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಮತ್ತು ಪ್ರಕಾಶ ಕಾಂಬಳೆ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಚೆನ್ನಯ್ಯ ಇಟ್ನಾಳಮಠ ಅವರು ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಅದರ ಜೊತೆಗೆ ಹೊಸ ಜವಾಬ್ದಾರಿಯನ್ನು ನಿಭಾಯಿಸಲು ಸಂಘಟನಾತ್ಮಕ ಹೋರಾಟಕ್ಕೆ ಅಡಿ ಇಟ್ಟಿರುವ ಹೊಸ ಪದಾಧಿಕಾರಿಗಳಿಗೆ ಶುಭವಾಗಲಿ ಎಂದು ಹಾರೈಸಿದರು. ನಂತರ ಮಾತನಾಡಿದ ಸಿಐಟಿಯು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ದೀಪಕ ಶಿಂಧೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸಲು ಮತ್ತು ಕಾರ್ಮಿಕರಿಗೆ ಅನ್ಯಾಯವಾದಾಗ ಧ್ವನಿ ಎತ್ತಿ ನ್ಯಾಯ ಕೊಡಿಸಲು ತಮ್ಮ ಕೊನೆ ಉಸಿರಿರುವರೆಗೂ ಹೋರಾಟ ಮಾಡುವದಾಗಿ ಭರವಸೆ ನೀಡಿದರು.
ಈ ವೇಳೆ ಹಿರಿಯ ಪತ್ರಕರ್ತ ಚೆನ್ನಯ್ಯ ಇಟ್ನಾಳಮಠ, ಬೆಳಗಾವಿ ಜಿಲ್ಲಾ ಗುತ್ತಿಗೆ ಪೌರ ಕಾರ್ಮಿಕ ಸಂಘಟನೆ ಅಧ್ಯಕ್ಷ ಬಸವರಾಜ ಕಾಂಬಳೆ, ತಾಲೂಕು ಅಧ್ಯಕ್ಷ ಆನಂದ ಕಾಂಬಳೆ, ಮಾನವ ಹಕ್ಕು ಸಂಘಟನೆಯ ಅಬ್ದುಲ್ ಜಬ್ಬಾರ ಚಿಂಚಲಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅಣ್ಣಾಸಾಬ ತೆಲಸಂಗ , ಕರ್ನಾಟಕ ವಿಜಯಸೇನೆ ಅಧ್ಯಕ್ಷ ಚಿದಾನಂದ ಶೇಗುಣಸಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.