ಬೆಳಗಾವಿ: ಮುಖ್ಯಮಂತ್ರಿ ಬಿಎಸ್‍ವೈ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ನಾಳೆಯಿಂದ ಎರಡು ದಿನಗಳ ಕಾಲ ಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ. ಉಭಯ ನಾಯಕರು ಮಧ್ಯಾಹ್ನ 3.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ ಮಾಜಿ ಸಚಿವ ಉಮೇಶ ಕತ್ತಿ ಅವರ ಮಾಲೀಕತ್ವದ ಯುಕೆ 27 ಹೋಟೆಲ್‍ನಲ್ಲಿ ನಡೆಯಲಿರುವ ಬಿಜೆಪಿ ಕೋರ್ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಡಿ. 5ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಅರುಣ್‍ಸಿಂಗ್, ಸಿಎಂ ಬಿ.ಎಸ್‍ವೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹಾಗೂ ಸಿ.ಟಿ. ರವಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ.
ಮಿತ್ರಮಂಡಳಿಗೆ ಸಿಗುತ್ತಾ ಸಿಹಿಸುದ್ದಿ!
ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಲವು ಸಲ ದೆಹಲಿಗೆ ತೆರಳಿ ರಾಷ್ಟ್ರನಾಯಕರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೂ ಸಂಪುಟ ಸರ್ಜರಿ ಸರ್ಕಸ್ ಮಾತ್ರ ಸುಖಾಂತ್ಯ ಕಾಣುತ್ತಿಲ್ಲ. ಮಂತ್ತೊದೆಡೆ ಸಿಎಂ ಯಡಿಯೂರಪ್ಪ ದೆಹಲಿ ಭೇಟಿ ವೇಳೆ ಒಮ್ಮೆಯೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್ ಅವರನ್ನು ಭೇಟಿ ಮಾಡಿಲ್ಲ. ಇದೀಗ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‍ಸಿಂಗ್ ಸಂಪುಟ ಸರ್ಜರಿ ಬಗ್ಗೆ ಹೈಕಮಾಂಡ್ ನೀಡುವ ಸಂದೇಶ ಹೊತ್ತು ದೆಹಲಿಯಿಂದ ಬೆಳಗಾವಿಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ನೀಡುವ ಸಂದೇಶದ ಬಗ್ಗೆ ಅರುಣ್‍ಸಿಂಗ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೆ ಚರ್ಚಿಸಲಿದ್ದಾರೆ. ಅರುಣ್ ಸಿಂಗ್ ರಾಜ್ಯ ಭೇಟಿಯಿಂದ ಸಂಪುಟ ಸೇರಲು ಉತ್ಸುಕರಾಗಿರುವ ಮಿತ್ರಮಂಡಳಿ ಸದಸ್ಯರು ಸೇರಿ ಮೂಲ ಬಿಜೆಪಿಗರಾದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ, ಸಿ.ಪಿ. ಯೋಗೇಶ್ವರ್ ಅವರ ಸಂತಸಕ್ಕೆ ಕಾರಣವಾಗಿದೆ. ಅಲ್ಲದೇ ಸಂಪುಟ ಸರ್ಜರಿ ಸರ್ಕಸ್‍ಗೂ ತಾರ್ಕಿಕ ಅಂತ್ಯ ಸಿಗಬಹುದು ಎಂಬ ಲೆಕ್ಕಾಚಾರ ರಾಜ್ಯ ನಾಯಕರು ಹೊಂದಿದ್ದಾರೆ.
ಇದನ್ನು ಓದಿ: ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ; ಕೇಸರಿಮಯವಾದ ಕುಂದಾನಗರಿ
ಅಭ್ಯರ್ಥಿ ಆಯ್ಕೆ ಬಗ್ಗೆ ತೀರ್ಮಾನ:
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರ ಹಾಗೂ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ. ಮೂರು ಕ್ಷೇತ್ರದ ಆಕಾಂಕ್ಷಿಗಳು ಈಗಾಗಲೇ ರಾಜ್ಯ ಬಿಜೆಪಿ ಘಟಕಕ್ಕೆ ಅರ್ಜಿ ಸಲ್ಲಿಸಿದ್ದು, ಕೋರ್ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ. ಬಳಿಕ ಪ್ರತಿ ಕ್ಷೇತ್ರದಿಂದ ನಾಲ್ಕರಿಂದ ಐದು ಅಭ್ಯರ್ಥಿಗಳ ಪಟ್ಟಿ ಕೋರ್ಕಮಿಟಿಯಿಂದ ಹೈಕಮಾಂಡ್‍ಗೆ ರವಾನೆಯಾಗಲಿದೆ. ಹೀಗಾಗಿ ಮೂರು ಕ್ಷೇತ್ರಗಳ ಆಕಾಂಕ್ಷಿಗಳು ನಾಳೆ ನಡೆಯಲಿರುವ ಕೋರ್ ಕಮಿಟಿ ಸಭೆಯ ನಿರ್ಧಾರದ ಬಗ್ಗೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ.