ಬೆಳಗಾವಿ : ನಗರದ ಖಾಸಗಿ ಹೋಟೆಲ್ನಲ್ಲಿ ಮಹತ್ವದ ರಾಜ್ಯ ಬಿಜೆಪಿ ಶಾಸಕಾಂಗ ಸಭೆ ಆರಂಭವಾಗಿದೆ. ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ, ಪರಿಷತ್ ಚುನಾವಣೆ ಫಲಿತಾಂಶ ಸೇರಿ ಹಲವು ವಿಚಾರಗಳು ಚರ್ಚೆಗೆ ಬರಲಿದೆ.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಸಭೆ ಆರಂಭವಾಗಿದೆ. ಶಾಸಕಾಂಗ ಸಭೆಯಲ್ಲಿ ಅನೇಕ ಮಹತ್ವದ ವಿಚಾರಗಳು ಚರ್ಚೆಗೆ ಬರಲಿವೆ. ಪ್ರಮುಖವಾಗಿ ಪರಿಷತ್ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ನಡೆಯಲಿದೆ. ನಿರೀಕ್ಷಿತ ಫಲಿತಾಂಶ ಬಾರದ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ಅದರಲ್ಲೂ ಬೆಳಗಾವಿ ಪರಿಷತ್ ಫಲಿತಾಂಶದ ಬಗ್ಗೆ ಚರ್ಚೆ ನಡೆಯಲಿದೆ. ಬೆಳಗಾವಿ ಸೋಲಿನ ಕಾರಣ, ನಿರೀಕ್ಷಿತ ಗೆಲುವು ಸಾಧಿಸದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಇನ್ನು ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ ಸಂಬಂಧ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಾಗಲೇ ವಿಧೇಯಕಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ವಿಧೇಯಕ ಮಂಡನೆ ವೇಳೆ ಎಲ್ಲರೂ ಹಾಜರು ಇರುವ ನಿಟ್ಟಿನಲ್ಲಿ ಸೂಚನೆ ನೀಡುವ ಸಾಧ್ಯತೆ ಇದೆ.
ಅತಿವೃಷ್ಟಿ, ಪರಿಹಾರ ವಿತರಣೆ ಸಂಬಂಧ ಶಾಸಕರು ತಮ್ಮ ಅಭಿಪ್ರಾಯವನ್ನು ಸಭೆಯ ಮುಂದೆ ಇಡಲಿದ್ದಾರೆ. ಇನ್ನು ಕೆಲ ಸಚಿವರ ಕಾರ್ಯವೈಖರಿ ಬಗ್ಗೆನೂ ಶಾಸಕರು ತಮ್ಮ ಅಸಮಾಧಾನ ಹೊರಹಾಕಲಿದ್ದಾರೆ ಎನ್ನಲಾಗಿದೆ. ಬಹುತೇಕ ಎಲ್ಲಾ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದು, ರಮೇಶ್ ಜಾರಕಿಹೊಳಿ, ಮಹಾಂತೇಶ ಕವಟಗಿಮಠ ಸಭೆಗೆ ಗೈರಾಗಿದ್ದಾರೆ.