ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಅಭಯ್ ಪಾಟೀಲ ನಡುವಿನ ಜಟಾಪಟಿ ಇದೀಗ ರಾಜ್ಯಪಾಲರ ಅಂಗಳ ತಲುಪಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ಬಿಜೆಪಿ ನಗರ ಸೇವಕರು ದೂರು ನೀಡಿದ್ದಾರೆ.
2023-24ರ ಆಸ್ತಿ ತೆರಿಗೆ ಹೆಚ್ಚಳ ನಿರ್ಣಯದ ದಿನಾಂಕ ತಿದ್ದುಪಡಿ ಮಾಡಿ 2024-25ರ ಕಳುಹಿಸಿದ್ದಾರೆ ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವಿರುದ್ಧ ಆಡಳಿತಾರೂಢ ಬಿಜೆಪಿ ಸದಸ್ಯರು ಸಮರ ಸಾರಿದ್ದಾರೆ. ಇದಕ್ಕೆ ಪ್ರತಿಯಾಗಿ ಆ ಕಡತ ಕಳುವಾಗಲು ಮೇಯರ್ ಅವರೇ ಕಾರಣ ಎಂದು ಪಾಲಿಕೆ ಪರಿಷತ್ ಸದಸ್ಯರಿಂದ ಸತೀಶ್ ಜಾರಕಿಹೊಳಿ ಅವರು ಪೊಲೀಸರಿಗೆ ದೂರು ಕೊಡಿಸಿದ್ದಾರೆ. ಪಾಲಿಕೆ ಆಯುಕ್ತರ ಬೆನ್ನಿಗೆ ಸತೀಶ ಜಾರಕಿಹೊಳಿ ನಿಂತಿದ್ದರೆ, ಮೇಯರ್ ಪರವಾಗಿ ಅಭಯ ಪಾಟೀಲ ನಿಂತಿದ್ದಾರೆ. ಪ್ರತಿ ದಿನವೂ ಈ ವಿಚಾರ ಒಂದೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂದು ವಿಟಿಯು ಕಾರ್ಯಕ್ರಮಕ್ಕೆ ಬಂದಿದ್ದ ರಾಜ್ಯಪಾಲರ ಗಮನಕ್ಕೂ ತರಲಾಗಿದೆ.
ಪಾಲಿಕೆ ಆಡಳಿತದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಸ್ತಕ್ಷೇಪ ಮಾಡ್ತಿದ್ದಾರೆ. ಸೂಪರ್ ಸೀಡ್ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ ನಗರಸೇವಕರ ಮನೆಗೆ ತೆರಳಿ ಹಲ್ಲೆ ಮಾಡುವ ಘಟನೆಗಳು ನಡೆಯುತ್ತಿವೆ. ಹಾಗಾಗಿ, ಪಾಲಿಕೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ನಿರ್ಭಿಡೆಯಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂದು ಶಾಸಕ ಅಭಯ ಪಾಟೀಲ ನೇತೃತ್ವದ ಬಿಜೆಪಿ ನಿಯೋಗವು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದರು. ಅಲ್ಲದೇ ಆಸ್ತಿ ತೆರಿಗೆ ಹೆಚ್ಚಳ ವಿಚಾರದಲ್ಲಿ ಸರ್ಕಾರಕ್ಕೆ ತಪ್ಪು ವರದಿ ಸಲ್ಲಿಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮಗಳ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ಬಿಜೆಪಿ ನಿಯೋಗ ಮನವಿ ಮಾಡಿದೆ.
ಈ ಬಿಜೆಪಿ ನಿಯೋಗದಲ್ಲಿ ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಅನಿಲ್ ಬೆನಕೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಪಾಲಿಕೆಯ ಬಹುತೇಕ ಬಿಜೆಪಿಯ ಎಲ್ಲ ಸದಸ್ಯರು ಇದ್ದರು. ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅಭಯ್ ಪಾಟೀಲ, ''ರಾಜ್ಯಪಾಲರಿಗೆ ಮೂರು ದೂರು ನೀಡಿದ್ದೇವೆ. ನಾಳೆ ಸುದ್ದಿಗೋಷ್ಠಿ ನಡೆಸಿ ಹೆಚ್ಚಿನ ಮಾಹಿತಿ ನೀಡುತ್ತೇವೆ. 138 ಜನ ಪೌರ ಕಾರ್ಮಿಕರ ನೇಮಕಾತಿಯ ಕುರಿತೂ ನಾಳೆ ಹೇಳುತ್ತೇವೆ. ರಾಜ್ಯಪಾಲರು 10 ನಿಮಿಷ ಟೈಂ ನೀಡಿ ಎಲ್ಲ ಮಾಹಿತಿ ಕೇಳಿದ್ದಾರೆ. ಮೇಯರ್, ಮಾಜಿ ಶಾಸಕ ಬೆನಕೆ ಹಾಗೂ ನಗರ ಸೇವಕ ಸಂದೀಪ ಜೀರಿಗ್ಯಾಳ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಿನ್ನೆ ನಮ್ಮ ನಗರಸೇವಕರ ಮನೆಯ ಮೇಲೆ ಹಲ್ಲೆಯಾಗಿದೆ. ಆದರೆ, ಇಲ್ಲಿಯವರೆಗೆ ಆರೋಪಿಗಳ ಬಂಧನವಾಗಿಲ್ಲ. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ'' ಎಂದು ಆರೋಪಿಸಿದರು.
ಸೆಪ್ಟೆಂಬರ್ 16ರಂದು ನಡೆದ ಸಾಮಾನ್ಯ ಸಭೆಯಲ್ಲಿ 2023-024ನೇ ಸಾಲಿಗೆ ಆಸ್ತಿಕರ ತೆರಿಗೆ ಹೆಚ್ಚಿಸಿ ಠರಾವು ಮಾಡಲಾಗಿತ್ತು. ಆದರೆ, ಸರ್ಕಾರಕ್ಕೆ ವರದಿ ಸಲ್ಲಿಸುವಾಗ ಪಾಲಿಕೆ ಆಯುಕ್ತರು 2024-25ನೇ ಸಾಲಿಗೆ ಅಂತಾ ಸರ್ಕಾರಕ್ಕೆ ತಪ್ಪು ವರದಿ ಸಲ್ಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪರಿಣಾಮ, ಮಹಾನಗರ ಪಾಲಿಕೆಯನ್ನು ಏಕೆ ಸೂಪರ್ ಸೀಡ್ ಮಾಡಬಾರದು ಎಂದು ರಾಜ್ಯ ಸರ್ಕಾರದಿಂದ ಬೆಳಗಾವಿ ಪಾಲಿಕೆಗೆ ನೋಟಿಸ್ ಬಂದಿತ್ತು. ಪಾಲಿಕೆ ಆಯುಕ್ತರ ವಿರುದ್ಧ ಕ್ರಮಕ್ಕೆ ಬಿಜೆಪಿ ನಿಯೋಗ ಒತ್ತಾಯಿಸಿದೆ.
ನಗರಸೇವಕ ಸಂದೀಪ ಜೀರಿಗ್ಯಾಳ ಮಾತನಾಡಿ, ''ಪಾಲಿಕೆ ಆಯುಕ್ತರು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಕುರಿತು ಸಮಗ್ರ ಮಾಹಿತಿ ತರಿಸಿಕೊಂಡು ಅಧ್ಯಯನ ಮಾಡಿ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ'' ಎಂದರು.
ಇದನ್ನೂ ಓದಿ: ವರ್ತೂರು ಸಂತೋಷ್ ಬಿಡುಗಡೆ: ಆತ್ಮೀಯವಾಗಿ ಬರಮಾಡಿಕೊಂಡ ಕುಟುಂಬಸ್ಥರು, ಬೆಂಬಲಿಗರು