ಬೆಳಗಾವಿ: ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ಆರೋಪದಲ್ಲಿ ರಾಜಕೀಯ ಏನೂ ಇಲ್ಲ. ಈಗ ಚುನಾವಣೆ ಮುಗಿದಿದ್ದು, ನೀವು ದಾಖಲೆ ಸಮೇತ ಬಹಿರಂಗ ಚರ್ಚೆ ಬರುವಂತೆ ಶಾಸಕ ವಿಠ್ಠಲ ಹಲಗೇಕರ್ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸವಾಲ್ ಹಾಕಿದ್ದಾರೆ.
ಖಾನಾಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಯಾವುದೇ ದಾಖಲೆ ಕೊಡ್ತಿಲ್ಲ. ಕಳೆದ 6 ವರ್ಷಗಳಿಂದ ಬೆನ್ನು ಬಿದ್ದ ಮೇಲೆ ನಿವೃತ್ತ ನ್ಯಾಯಾಧೀಶ ಎಸ್.ಪಿ.ವಸ್ತ್ರದ ಅವರ ನೇತೃತ್ವದಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದ ಅವರು, ಇದರಲ್ಲಿ ರಾಜಕೀಯ ಏನೂ ಇಲ್ಲ. ಚುನಾವಣೆ ಮುಗಿದಿದೆ. ರಾಜಕೀಯ ಮಾಡುವುದಾಗಿದ್ದರೆ ಚುನಾವಣೆ ವೇಳೆಯೇ ಹೇಳುತ್ತಿದ್ದೆ. ನಮ್ಮ ಕಾರ್ಯಕರ್ತರಿಗೆ ಈ ಬಗ್ಗೆ ನಾನು ತಿಳಿಸಿರಲಿಲ್ಲ. ಅವರ ಬಳಿ ದಾಖಲೆ ಇದ್ದರೆ ಖಾನಾಪುರ ಪಟ್ಟಣದ ಮಲಪ್ರಭಾ ಮೈದಾನಕ್ಕೆ ದಾಖಲೆ ಸಮೇತ ಬರಲಿ. ನಾನು ಕೂಡ ಬರುತ್ತೇನೆ ಎಂದು ಚಾಲೆಂಜ್ ಮಾಡಿದರು.
2009ರಲ್ಲಿ ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ:ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಅವ್ಯವಹಾರ ತನಿಖೆ ಹಿನ್ನೆಲೆ ನಾನು ದೂರುದಾರ ಆಗಿದ್ದು, ನನ್ನ ಉದ್ದೇಶ ಹೇಳಲು ಮಾಧ್ಯಮಗಳ ಮುಂದೆ ಬಂದಿದ್ದೇನೆ. ಅವ್ಯವಹಾರ, ಹಣದ ದುರುಪಯೋಗದ ದೂರು ನೀಡಿದ್ದೇನೆ. ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2009ರಲ್ಲಿ ಖಾಸಗಿ ಲೈಲಾ ಸಕ್ಕರೆ ಕಾರ್ಖಾನೆಗೆ ಗುತ್ತಿಗೆ ಕೊಡ್ತಾರೆ. ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಅನೇಕ ಷರತ್ತು ವಿಧಿಸಲಾಗಿದೆ. ಇಲ್ಲಿಯವರೆಗೆ ಲೈಲಾ ಸಕ್ಕರೆ ಕಾರ್ಖಾನೆಯವರು ಷರತ್ತು ಈಡೇರಿಸಿಲ್ಲ. ಲೈಲಾ ಸಕ್ಕರೆ ಕಾರ್ಖಾನೆಗೆ ಯಾರೊಬ್ಬರೂ ಪ್ರಶ್ನೆ ಕೇಳಿಲ್ಲ ಎಂದು ಆರೋಪಿಸಿದರು.
2018ರಲ್ಲಿ ಮಹಾಲಕ್ಷ್ಮಿ ಶುಗರ್ಗೆ ಗುತ್ತಿಗೆ:2018ರಲ್ಲಿ ಲೈಲಾ ಬದಲಾಗಿ ಮಹಾಲಕ್ಷ್ಮಿ ಶುಗರ್ ಅಂಡ್ ಆಗ್ರೋಗೆ ಸರ್ಕಾರದ ಗಮನಕ್ಕೆ ತರದೇ ಗುತ್ತಿಗೆ ನೀಡಲಾಗಿದೆ. ಲೈಲಾ ಸಕ್ಕರೆ ಗುತ್ತಿಗೆ ಕೊಡಲು ಅವರಿಗೆ ಏನು ಅಧಿಕಾರ ಇದೆ. ಲೈಲಾ ಕಡೆಯಿಂದ ಮಹಾಲಕ್ಷ್ಮಿಗೆ ಎಲ್ಲ ಶೇರ್ ವರ್ಗಾವಣೆ ಆಗಿದೆ. ಇನ್ನು ರೈತರ ಬಾಕಿ ಕೊಡುವ ಜವಾಬ್ದಾರಿ ಲೈಲಾ ಮತ್ತು ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯವರು ಕೊಡಬೇಕು ಎನ್ನುತ್ತಾರೆ.
ಸರ್ಕಾರಿ ಆಸ್ತಿಯನ್ನು ಇಬ್ಬರು ಖಾಸಗಿಯವರು ದುರುಪಯೋಗ ಮಾಡಿಕೊಂಡಿದ್ದಾರೆ. ಸಾಲ, ರೈತರ ಬಾಕಿಯ ಜವಾಬ್ದಾರಿ ಸರ್ಕಾರ ಮೇಲೆ ಹಾಕಿದ್ದಾರೆ. ಸಕ್ಕರೆ ಕಾರ್ಖಾನೆ ಸ್ಕ್ಯಾಪ್ ಮಾರಾಟ ಸಂದರ್ಭದಲ್ಲಿಯೂ ಸರ್ಕಾರದ ಗಮನಕ್ಕೆ ತಂದಿಲ್ಲ. ಸರ್ಕಾರದ ಆಸ್ತಿಯನ್ನು ಖಾಸಗಿಯವರು ಅನುಭವಿಸುತ್ತಿದ್ದಾರೆ ಎಂದು ಅಂಜಲಿ ನಿಂಬಾಳ್ಕರ್ ಆರೋಪಿಸಿದರು.
ಲೈಲಾ ಸಕ್ಕರೆ ಕಾರ್ಖಾನೆಗೆ ಕಬ್ಬು ಕ್ರಷಿಂಗ್ ಮಾಡೋ ಅನುಮತಿ ಸರ್ಕಾರ ನೀಡಿದೆ. ಆದರೆ, ಇಲ್ಲಿ ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆ ಪಾತ್ರ ಏನು. ಲೈಲಾ, ಮಹಾಲಕ್ಷ್ಮಿ ಇಬ್ಬರು ದೊಡ್ಡವರಾಗಿದ್ದಾರೆ. ಅದಾನಿ, ಅಂಬಾನಿ ಆಗುತ್ತಿದ್ದಾರೆ. ಆದರೆ ರೈತರು ಮಾತ್ರ ಸಾಯುತ್ತಿದ್ದಾರೆ. ರೈತರಿಗೆ ಕೊಡಬೇಕಾದ ಬಾಕಿ ಹಣ ಕೊಟ್ಟಿಲ್ಲ. ಎರಡು ತಿಂಗಳಿಗೊಮ್ಮೆ ಬಿಲ್ ಕ್ಲಿಯರ್ ಮಾಡುತ್ತಿದ್ದಾರೆ. ಇನ್ನು ರೈತರ ಹಣ ಬಹಳಷ್ಟು ಬಾಕಿ ಉಳಿದಿದೆ ಎಂದು ಆಪಾದಿಸಿದರು.
ಕಾರ್ಖಾನೆ ವರ್ಗಾವಣೆ ವೇಳೆ ಟೆಂಡರ್ ಕರೆದಿಲ್ಲ:ಸರ್ಕಾರ, ಸಕ್ಕರೆ ಸಂಸ್ಥೆ ಅನುಮತಿ ಇಲ್ಲದೇ ವರ್ಗಾವಣೆ ಆಗಿದೆ. ಸರ್ಕಾರದ ಆಸ್ತಿಯನ್ನು ಯಾರೂ ಮಜಾ ಮಾಡಬಾರದು. ಸಕ್ಕರೆ ಕಾರ್ಖಾನೆ ವರ್ಗಾವಣೆ ಸಂದರ್ಭದಲ್ಲಿ ಟೆಂಡರ್ ಕರೆದಿಲ್ಲ.
ಮಹಾಲಕ್ಷ್ಮಿ ಸಕ್ಕರೆ ಕಾರ್ಖಾನೆ ಸಂಸ್ಥೆಗೆ ಯಾವುದೇ ಅನುಭವ ಇಲ್ಲ. ಖಾನಾಪುರ ಶಾಸಕ ವಿಠ್ಠಲ ಹಲಗೇಕರ್ ಕೂಡ ಆ ಸಂಸ್ಥೆಯ ಒಬ್ಬ ನಿರ್ದೇಶಕ. ತನಿಖೆ ಬಳಿಕ ಎಷ್ಟು ಕೋಟಿ ಅವ್ಯವಹಾರ ಆಗಿದೆ ಎಂಬುದು ಗೊತ್ತಾಗುತ್ತೆ. ಸರ್ಕಾರದ ಆಸ್ತಿಯನ್ನು ಇಬ್ಬರು ಖಾಸಗಿ ಸಂಸ್ಥೆಯವರು ಮಜಾ ಮಾಡಿದ್ದಾರೆ. ಎಲ್ಲ ಅವ್ಯವಹಾರದ ಬಗ್ಗೆ ತನಿಖೆ ಆಗಬೇಕು. 14 ವರ್ಷಗಳಿಂದ ಆಗಿರುವ ಎಲ್ಲ ಅವ್ಯವಹಾರ ಹೊರಬರಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅಂಜಲಿ ನಿಂಬಾಳ್ಕರ್ ಆಗ್ರಹಿಸಿದರು.
ರೈತರ ಹಣ ರೈತರಿಗೆ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ. ತನಿಖೆ ಆರಂಭವಾದ ತಕ್ಷಣ ಕೋರ್ಟ್ ಮೇಟ್ಟಿಲು ಏರಿದ್ದಾರೆ. ರಿಟ್ ಪೆಟಿಷನ್ ನಲ್ಲಿ ಕೆಲ ಅಂಶಗಳು ಉಲ್ಲೇಖಿಸಲಾಗಿದೆ. ಇನ್ನು ತೆಂಗಿನಕಾಯಿ ಕೊಟ್ಟು ಸಕ್ಕರೆ ಕಾರ್ಖಾನೆ ತೆಗೆದುಕೊಂಡಿದ್ದೇನೆ ಎಂದು ಶಾಸಕರು ಹೇಳಿದ್ದಾರೆ. ಇದು ಈ ಕಾಲದಲ್ಲಿ ಸಾಧ್ಯವೇ. ತೆಂಗಿನಕಾಯಿ ಮೇಲೆ ಒಂದು ಕಾರ್ಖಾನೆಗೆ ಖರೀದಿ ಮಾಡಲು ಸಾಧ್ಯವೆ ಎಂದು ಅಂಜಲಿ ನಿಂಬಾಳ್ಕರ್ ಲೇವಡಿ ಮಾಡಿದರು.
ಇದನ್ನೂಓದಿ:ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ: ಸಚಿವ ಸತೀಶ ಜಾರಕಿಹೊಳಿ ಆರೋಪ