ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾದ ಎರಡು ಹೊಸ ಪ್ರಬೇಧಗಳು ಪತ್ತೆಯಾದ ಹಿನ್ನೆಲೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆತಂಕ ಹೆಚ್ಚಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ ಎನ್ನಲಾಗ್ತಿದೆ. ಗಡಿ ಭಾಗದಲ್ಲಿ ಯಾವುದೇ ರೀತಿಯ ತಪಾಸಣೆಯೇ ಇಲ್ಲದ ಕಾರಣ ಶಿನೋಳಿ ಚೆಕ್‌ಪೋಸ್ಟ್‌ನಲ್ಲಿ ಪ್ರಯಾಣಿಕರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಬೆಳಗಾವಿಯಿಂದ ನಿತ್ಯ 300ಕ್ಕೂ ಹೆಚ್ಚು ಬಸ್‌ಗಳು ಸಂಚಾರ ನಡೆಸುತ್ತಿದ್ದು, ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಸಾವಿರಾರು ಪ್ರಯಾಣಿಕರು ನಿತ್ಯ ಓಡಾಡುತ್ತಿದ್ದಾರೆ.
ದಿನೇ ದಿನೇ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚೆಚ್ಚು ದಾಖಲಾಗುತ್ತಿವೆ. ಶುಕ್ರವಾರ ಮಹಾರಾಷ್ಟ್ರದಲ್ಲಿ 6,112 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ ಒಂದೇ ದಿನ ಕೊರೊನಾದಿಂದ 44 ಜನರು ಮೃತಪಟ್ಟಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ 44,765 ಕೊರೊನಾ ಪಾಸಿಟಿವ್ ಕೇಸ್ ಗಳಿದ್ದು, ಕಳೆದ ಎರಡು ದಿನಗಳಲ್ಲಿ ಮಹಾರಾಷ್ಟ್ರದ ನಾಲ್ವರು ಸಚಿವರಿಗೆ ಕೋವಿಡ್ ಸೋಂಕು ತಗುಲಿದೆ.
ಕೊರೊನಾ ಎರಡನೇ ಅಲೆ ಆತಂಕ ಇದ್ದರೂ ಬೆಳಗಾವಿ ಜಿಲ್ಲಾಡಳಿತ ಡೋಂಟ್ ಕೇರ್ ಎನ್ನುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದೇ ಇದ್ರೆ ಕುಂದಾನಗರಿ ಬೆಳಗಾವಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ 21 ಕೋಟಿ ಮಂದಿಗೆ ಟೆಸ್ಟ್.. 1.07 ಕೋಟಿ ಕೊರೊನಾ ವಾರಿಯರ್ಗಳಿಗೆ ಲಸಿಕೆ