ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವ ರೆಮ್ಡಿಸಿವಿರ್ ಕುರಿತು ಆಡಿಟ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ರೆಮ್ಡಿಸಿವಿರ್ ದುರ್ಬಳಕೆ ಮಾಡಿಕೊಂಡ ವೈದ್ಯಕೀಯ ಸಿಬ್ಬಂದಿಗೀಗ ಭಯ ಶುರುವಾಗಿದೆ.
ಜಿಲ್ಲಾಡಳಿತದಿಂದಲೇ ಆಡಿಟ್ ಮಾಡಲು ತಂಡ ರಚಿಸಲಾಗಿದೆ. ಕೋವಿಡ್ ಚಿಕಿತ್ಸೆಗೆ ರೆಮ್ಡಿಸಿವಿರ್ ಬಳಕೆ ಜಾಸ್ತಿಯಾದ ಪರಿಣಾಮ ಕೆಲವೆಡೆ ಕೊರತೆ ಉಂಟಾಗಿರುತ್ತದೆ. ಇದರಿಂದಾಗಿ ಅಕ್ರಮ ಮಾರಾಟ ಪ್ರಕರಣಗಳು ಕೂಡ ವರದಿಯಾಗಿರುತ್ತವೆ.
ಆಸ್ಪತ್ರೆಗಳಲ್ಲಿ ವೈದ್ಯಕೀಯ ಅಗತ್ಯತೆ ಆಧರಿಸಿ ರೆಮ್ಡಿಸಿವಿರ್ ಬಳಸಿರುವುದು ಹಾಗೂ ಬಳಕೆಯಾಗಿರುವ ರೆಮ್ಡಿಸಿವಿರ್ ಪ್ರಮಾಣದ ಕುರಿತು ತಜ್ಞ ವೈದ್ಯರನ್ನು ಒಳಗೊಂಡ ಸಮಿತಿಯು ಆಡಿಟ್ ನಡೆಸಲಿದೆ. ಜಿಲ್ಲೆಯ ಆಯಾ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಆಡಿಟ್ ಸಮಿತಿ ರಚಿಸಲಾಗಿದ್ದು, ಅವರ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಬಳಕೆ ಕುರಿತು ಅವರು ಆಡಿಟ್ ನಡೆಸಲಿದ್ದಾರೆ.
ಇದನ್ನೂ ಓದಿ: ಆಕ್ಸಿಜನ್ ಆಸ್ಪತ್ರೆಯಾಗಿ ಬದಲಾವಣೆಯಾದ ಹೆರಿಗೆ ಆಸ್ಪತ್ರೆ!
ಸರ್ಕಾರದ ಮಾರ್ಗಸೂಚಿ ಆಧರಿಸಿ ಅತ್ಯಗತ್ಯ ಸಂದರ್ಭಗಳಲ್ಲಿ ರೆಮ್ಡಿಸಿವಿರ್ ಬಳಸಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಎಲ್ಲ ಮಾಹಿತಿಯನ್ನು ಕಾಯ್ದಿರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ.