ಬೆಂಗಳೂರು: ಕಲಬರುಗಿಯಲ್ಲಿ ಪಿಎಂ ಮಿತ್ರ ಪಾರ್ಕ ಯೋಜನೆಯಡಿ ಮೆಗಾ ಜವಳಿ ಪಾರ್ಕ್ ಸ್ಥಾಪಿಸಲು 1000 ಎಕರೆ ಜಮೀನನ್ನು ಕ್ಯಾಬಿನೆಟ್ ಅನುಮೋದನೆಯೊಂದಿಗೆ ರಾಜ್ಯ ಸರ್ಕಾರವು ಹಸ್ತಾಂತರಿಸಲಿದೆ ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ವಿಧಾನ ಪರಿಷತ್‌ಗೆ ತಿಳಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯ ಎಸ್.ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು , ರಾಜ್ಯದ ಕಲಬುರಗಿ ತಾಲೂಕಿನ ಕಿರಣಗಿ, ನದಿಸಿನ್ನೂರು ಹಾಗೂ ಫಿರೋಜಾಬಾದ್ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಡಿ 1000 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಅಂತಾರಾಷ್ಟ್ರೀಯ ಮಟ್ಟದ ಜವಳಿ ಮತ್ತು ಸಿದ್ದ ಉಡುಪು ಪಾರ್ಕ್ ಸ್ಥಾಪನೆಗೆ ಅನುಮೋದನೆ ನೀಡಲಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ PM- MITRA Park ಎಲ್ಲ ಜವಳಿ ಸರಪಳಿಯನ್ನು ಒಂದೇ ಸ್ಥಳದಲ್ಲಿ ಸ್ಥಾಪಿಸುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಿ, ಹೂಡಿಕೆ ಆಕರ್ಷಿಸಿ, ಉತ್ಪಾದನೆ, ಉದ್ಯೋಗ ಮತ್ತು ರಫ್ತು ಸಾಮರ್ಥ್ಯ ಹೆಚ್ಚಿಸುವುದು. ಜವಳಿ ಉದ್ಯಮದ ಎಲ್ಲ ಮೌಲ್ಯ ಸರಪಳಿಯನ್ನೊಳಗೊಂಡ ಸಮಗ್ರ ದೊಡ್ಡ ಪ್ರಮಾಣದ ಮತ್ತು ಆಧುನಿಕ ಕೈಗಾರಿಕಾ ಮೂಲ ಸೌಕರ್ಯ ಸೌಲಭ್ಯ ಅಭಿವೃದ್ಧಿಪಡಿಸುವುದು. ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಕರ್ನಾಟಕವನ್ನು ಸ್ಪರ್ಧಾತ್ಮಕ ರಾಜ್ಯವನ್ನಾಗಿಸಲು ಹೂಡಿಕೆಗಳನ್ನು ಆಕರ್ಷಿಸಿ ಹೆಚ್ಚಿನ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ ಎಂದು ವಿವರಣೆ ನೀಡಿದರು.
ಸುಸ್ಥಿರ ಕೈಗಾರೀಕರಣದ ಅನ್ವೇಷಣೆ ಹಾಗೂ ಉತ್ತೇಜನೆ, ನಾವೀನ್ಯ ಅನ್ವೇಷಣೆ, ಸ್ಥಿತಿ ಸ್ಥಾಪಕ ಸೌಕರ್ಯವನ್ನು ನಿರ್ಮಿಸುವ ಧ್ಯೆಯೋದ್ದೇಶ ಒಳಗೊಂಡಿದೆ. ಈ ಮೆಗಾ ಪಾರ್ಕ್ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಸಹಯೋಗದಲ್ಲಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ. ಅಲ್ಲದೇ ಸಾರ್ವಜನಿಕ - ಖಾಸಗಿಯವರ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ರಾಯಚೂರು ಜಿಲ್ಲೆಯ ರಾಯಚೂರು, ಧಾರವಾಡ ಜಿಲ್ಲೆಯ ನವಲಗುಂದ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತ್ತು ಚಿತ್ರದುರ್ಗ ಜಿಲ್ಲೆಯ ಕೊಂಡ್ಲಹಳ್ಳಿ ಈ ಭಾಗಗಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಖಾಸಗಿ ಒಡೆತನದಲ್ಲಿ ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಉಡುಪುಗಳನ್ನು ಉತ್ತೇಜಿಸಲು ಟೆಕ್ಸಟೈಲ್ ಪಾರ್ಕ್ ಅನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. PM MITRA Park ಯೋಜನೆಯಡಿ ನಿರ್ಮಿತವಾಗಲಿರುವ ಪಾರ್ಕ 2 ಹಂತಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರವು 500 ಕೋಟಿಗಳ ಅನುದಾನ ಒದಗಿಸಲಿದೆ. ಅನುಬಂಧ-3 ರಲ್ಲಿ ವಿವರಗಳನ್ನು ಒದಗಿಸಿದೆ. ರಾಜ್ಯ ಸರ್ಕಾರವು ಸದರಿ ಪಾರ್ಕ್ನಲ್ಲಿ ಸ್ಥಾಪನೆ ಆಗಲಿರುವ ಜವಳಿ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಹಾಗೂ ನೀರನ್ನು ಸರಬರಾಜು ಮಾಡಲಿದೆ ಎಂದು ತಿಳಿಸಿದರು.
ಬಳ್ಳಾರಿ ಜೀನ್ಸ್ ಟೆಕ್ಸ್ಟೈಲ್ ಪಾರ್ಕ್ ಗೆ 50 ಎಕರೆ ಜಮೀನು:ಬಳ್ಳಾರಿ ಜಿಲ್ಲೆಯಲ್ಲಿ ಜೀನ್ಸ್ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪಿಸಲು ಗೆ ಕೆಐಎಡಿಬಿಯಿಂದ ಆಲದಹಳ್ಳಿ ಗ್ರಾಮದ ಸರ್ವೆ ನಂ.122/ಎ ರ 50 ಎಕರೆ ಜಮೀನನ್ನು ಬಳ್ಳಾರಿ ಗಾರ್ಮೆಂಟ್ಸ್ ಎಕ್ಸ್ಪೋರ್ಟ್ ಕ್ಲಸ್ಟರ್ ಪ್ರೈ ಲಿ ಅವರಿಗೆ ಹಂಚಿಕೆ ಮಾಡಲಾಗಿದೆ ಎಂದು ಎಂದು ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ್ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವ್ಯೆ ಎಂ ಸತೀಶ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಸದರಿ ಎಸ್ಪಿವಿ ಮುಖಾಂತರ ಜವಳಿ ಪಾರ್ಕ್ನ್ನು ಸ್ಥಾಪಿಸಲು ಅವಶ್ಯವಿರುವ ಪ್ರಾರಂಭಿಕ ಕ್ರಮಗಳು , ವಿವಿಧ ಇಲಾಖೆಗಳಿಂದ ಪ್ರಮಾಣ ಪತ್ರಗಳನ್ನು ಹಾಗೂ ಕೆಐಎಡಿಬಿಯಿಂದ ಯೋಜನಾ ವರದಿಗೆ ಅನುಮೋದನೆ ಪಡೆದ ನಂತರ ಪಾರ್ಕ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶರವಣ-ಬೈರತಿ ನಡುವೆ ಮಾತಿನ ಚಕಮಕಿ: ವಿಧಾನ ಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಶರವಣ ಹಾಗೂ ಸಚಿವ ಬೈರತಿ ಸುರೇಶ್ ನಡುವೆ ಜಟಾಪಟಿ ನಡೆಯಿತು. ಪ್ರಶ್ನೋತ್ತರ ಕಲಾಪದಲ್ಲಿ ಶರವಣ ಇ ಖಾತೆ ಅಕ್ರಮ ಕುರಿತಾದ ಪ್ರಶ್ನೆಗೆ ಕಾಲಾವಕಾಶ ಕೋರಲಾಗಿದೆ ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಪ್ರಾಣೇಶ್ ತಿಳಿಸಿ, ನಂತರ ಉತ್ತರ ಒದಗಿಸಿಕೊಡುವುದಾಗಿ ಹೇಳಿದರು.
ಇದರಿಂದ ಅಸಮಾಧಾನಗೊಂಡ ಶರವಣ, ಇದರಲ್ಲಿ ದೊಡ್ಡ ಕರ್ಮಕಾಂಡವಿದೆ. ಅನೇಕ ದೊಡ್ಡ ದೊಡ್ಡ ತಿಮಿಂಗಲಗಳು ಭಾಗಿಯಾಗಿವೆ ಎಂದು ಶರವಣ, ನಾನು ಪ್ರಶ್ನೆ ಕೇಳಿ 25 ದಿನ ಆಯ್ತು, ಇನ್ನು ಉತ್ತರ ಕೊಡದೆ ಮತ್ತೆ 15 ದಿನ ಸಮಯ ಕೇಳಿದರೆ ಹೇಗೆ..? ಶುಕ್ರವಾರದೊಳಗೆ ನನಗೆ ಉತ್ತರ ಕೊಡಿಸಬೇಕೆಂದು ಸಭಾಪತಿ ಅವರಿಗೆ ಒತ್ತಾಯಿಸಿದರು.
ಈ ವೇಳೆ, ಎದ್ದು ನಿಂತ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಏ ನೀನು ಇನ್ವೆಸ್ಟ್ ಮಾಡಬೇಡವೆಂದು ಶರವಣಗೆ ಏರುದನಿಯಲ್ಲಿ ಗದರಿದರು. ಈ ವೇಳೆ ಶರವಣ ಮತ್ತು ಬೈರತಿ ಸುರೇಶ್ ನಡುವೆ ಮಾತಿನ ಚಕಮಕಿ ನಡೆಯಿತು. ಸಚಿವರ ವರ್ತನೆಗೆ ಬಿಜೆಪಿ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ಪಾಯಿಂಟ್ ಆಫ್ ಆರ್ಡರ್ ಎತ್ತಿದ ಜೆಡಿಎಸ್‌ನ ತಿಪ್ಪೇಸ್ವಾಮಿ ಶರವಣ ನೆರವಿಗೆ ಧಾವಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಪ್ರಾಣೇಶ್ ಅವರು, ಶಾಸಕರು ತಮ್ಮ ಪ್ರಶ್ನೆಗೆ ಉತ್ತರ ಪಡೆಯುವುದು ಅವರ ಹಕ್ಕು, ಆದಷ್ಟು ಬೇಗ ಅವರಿಗೆ ಉತ್ತರ ಒದಗಿಸಿ. ಆದರೆ ಸಚಿವರು ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಬೈರತಿ ಸುರೇಶ್ ಅವರಿಗೆ ಬುದ್ಧಿವಾದ ಹೇಳಿದರು.
ಸಚಿವರೇ ಆದಷ್ಟು ಬೇಗ ಅವರಿಗೆ ಉತ್ತರ ಒದಗಿಸಿ ಎಂದು ಪೌರಾಡಳಿತ ಸಚಿವ ರಹೀಂಖಾನ್ಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಸಚಿವ ರಹೀಂ ಖಾನ್, ಜಿಲ್ಲೆಗಳಿಂದ ಮಾಹಿತಿ ಬರಬೇಕು, ಅದನ್ನು ಪಡೆದು ಶೀಘ್ರ ಉತ್ತರ ಒದಗಿಸುವುದಾಗಿ ತಿಳಿಸಿದರು.
ಇದನ್ನೂ ಓದಿ:ಏತ ನೀರಾವರಿ ಯೋಜನೆಗಳ ದುರಸ್ತಿ ಕಾರ್ಯ ಶೀಘ್ರ ಪೂರ್ಣ: ಡಿಸಿಎಂ