ಬೆಳಗಾವಿ: ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚನೆ ಮಾಡುತ್ತಿರುವ ಗ್ಯಾಂಗ್ವೊಂದು ಹುಟ್ಟಿಕೊಂಡಿದ್ದು, ಇದರ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರುವಂತೆ ಬೆಳಗಾವಿ ಎಸ್ಪಿ ಮನವಿ ಮಾಡಿದ್ದಾರೆ.
ನಕಲಿ ಆದೇಶ ಪ್ರತಿ ಸಿದ್ಧಪಡಿಸಿ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಯುವಕರು ಮೋಸ ಹೋಗದಂತೆ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಮನವಿ ಮಾಡಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಿನಲ್ಲಿ ನಕಲಿ ಆದೇಶ ಪ್ರತಿ ಸಿದ್ಧಪಡಿಸಿ, ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿರುವ ವಂಚಕರ ಗ್ಯಾಂಗ್ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರನಲ್ಲಿ ನಕಲಿ ಆದೇಶ ಪತ್ರ ಸಿದ್ಧಪಡಿಸಿದೆ.
ಪ್ರತಿ ಆಕಾಂಕ್ಷಿಗಳ ಹತ್ತಿರ 5 ಲಕ್ಷಕ್ಕೂ ಅಧಿಕ ರೂಪಾಯಿ ಹಣದ ವ್ಯವಹಾರ ಮಾಡುತ್ತಿರುವ ಗ್ಯಾಂಗ್, ಮೊದಲ ಹಂತವಾಗಿ ಹಾಗೂ ಮುಂಗಡವಾಗಿ ₹ 2 ರಿಂದ ₹ 3 ಲಕ್ಷ ರೂ. ಹಣ ಪಡೆದು, ಕೆಲವು ದಿನಗಳ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹಾಗೂ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಕಲಿ ಆದೇಶ ಪ್ರತಿ ಸಿದ್ದಪಡಿಸಿ ಆಕಾಂಕ್ಷಿಗಳಿಗೆ ತೋರಿಸುತ್ತಾರೆ. ಮಾತುಕತೆ ಮುಗಿದ ಮೇಲೆ ಬಾಕಿ ಹಣ ನೀಡಿದ ನಂತರವೇ ಆದೇಶ ಪ್ರತಿ ನೀಡುವುದಾಗಿ ಹೇಳಿ, ಹಣ ಪಡೆದ ನಂತರ ನಕಲಿ ಆದೇಶ ಪ್ರತಿ ನೀಡುತ್ತಿರುವುದು ಗಮನಕ್ಕೆ ಬಂದಿದೆ.
ಈಗಾಗಲೇ ಅನೇಕ ಜನರಿಗೆ ಆದೇಶ ಪ್ರತಿ ನೀಡಿರುವುದಾಗಿ ತಿಳಿಸಿ, ತಾವು ಸಿದ್ಧಪಡಿಸಿದ ನಕಲಿ ಆದೇಶ ಪ್ರತಿಯನ್ನು ಜನರಿಗೆ ತೋರಿಸಿ ಮರಳು ಮಾಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾರೆಎನ್ನಲಾಗಿದೆ.
ಇದನ್ನೂ ಓದಿರಿ: ನ್ಯಾಯಾಂಗ ಪ್ರಜಾಪ್ರಭುತ್ವದ ಆಧಾರ ಸ್ತಂಭ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹುಬ್ಬಳಿ, ಹಾವೇರಿ, ಶಿಗ್ಗಾವಿ, ಮುಂಡಗೋಡ, ಗೋಕಾಕ, ಬಾಗಲಕೋಟೆ ಸೇರಿದಂತೆ ಇನ್ನಿತರ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಈ ವಂಚಕ ಗ್ಯಾಂಗ್ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರಾಥಮಿಕ ಹಂತದಲ್ಲಿ ಪೊಲೀಸ್ರಿಗೆ ಮಾಹಿತಿ ಸಿಕ್ಕಿದೆ.
ನಕಲಿ ಆದೇಶ ಪತ್ರದಲ್ಲೆನಿದೆ ?
2020-21ರ ನಾಗರಿಕ ಪೊಲೀಸ್ ಕಾನ್ಸ್‌ಟೆಬಲ್ ನೇಮಕಾತಿ ಜಿಲ್ಲೆಯ ಪ್ರಥಮ ಪೊಲೀಸ್ ಸಿವಿಲ್ ಕಾನ್ಸಟೆಬಲ್ (ಖೋಟಾ ನೇದ್ದರ) ಆಯ್ಕೆ ಪಟ್ಟಿ ಎಂದು ನಮೋದಿಸಿ, ಪಟ್ಟಿಯಲ್ಲಿರುವ ಅಭ್ಯರ್ಥಿಯಾದ ವಿಲಾಸ್ ತಂದೆ ರಾಜೇಂದ್ರ ಬಗರನಾಳ ಎಂಬಾತನಿಗೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ನಾಗರೀಕ ಪೊಲೀಸ್ ಕಾನ್ಸಟೆಬಲ್ ಅಂತ ಆಯ್ಕೆಗೊಂಡಿದ್ದು, ಮೇಲ್ಕಾಣಿಸಿದ ಅಧಿಸೂಚನೆ ಅನ್ವಯ 22-07-2021 ರಂದು ಹೊರಡಿಸಿದ ಆದೇಶದ ಅನ್ವಯ ನೀವು 01-08-2021 ರಿಂದ 21-08-2021ರೊಳಗಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮುಂದೆ ಹಾಜರಾಗಿ ಸಂಬಂಧ ಪಟ್ಟ ಪೊಲೀಸ್ ತರಬೇತಿ ಕೇಂದ್ರ ಹಾಜರಾಗಲು ಸೂಚಿಸಿದೆ. ಅಲ್ಲದೇ ಅಭ್ಯರ್ಥಿ ಕೇಂದ್ರ ಸ್ಥಾನಕ್ಕೆ ಬರುವಾಗ ತಮ್ಮ ಮೂಲ ದಾಖಲಾತಿಗಳೊಂದಿಗೆ ನಿಗದಿಪಡಿಸಿದ ದಿನಾಂಕದೊಳಗೆ ಹಾಜರಾಗಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ನಕಲಿ ಆದೇಶ ಪ್ರತಿ ಸಿದ್ದಪಡಿಸುತ್ತಿರುವ ವಂಚಕರ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಾರ್ವಜನಿಕರು ಇಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.ಯಾವುದೇ ಕಾರಣಕ್ಕೂ ಮೋಸ ಹೋಗಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.