ಬೆಳಗಾವಿ: ಬೆಂಗಳೂರಿನಲ್ಲಿ ಸೋಮವಾರ ನಡೆದ ಮುಖ್ಯಮಂತ್ರಿ ಪದಕ ವಿತರಣಾ ಕಾರ್ಯಕ್ರಮದಲ್ಲಿ ಸವದತ್ತಿ ವಲಯ ಅರಣ್ಯ ಅಧಿಕಾರಿ ಸುನಿತಾ ನಿಂಬರಗಿ ಸೇರಿದಂತೆ ಮೂವರು ಪದಕ ಸ್ವೀಕರಿಸಿದ್ದಾರೆ.
ಶೌರ್ಯ ಹಾಗೂ ದಿಟ್ಟತನ ವಿಭಾಗದಲ್ಲಿ ಸುನಿತಾ ನಿಂಬರಗಿ, ಕಾರ್ಯ ಯೋಜನೆ ವಿಭಾಗದಲ್ಲಿ ಎ.ವೈ. ಪಾಟೀಲ ಹಾಗೂ ಸಹಾಯಕ ವಲಯ ಅರಣ್ಯ ಅಧಿಕಾರಿ ಗುರುನಾಥ ಬಾಯನ್ನವರ ಪದಕ ಪಡೆದಿದ್ದಾರೆ.
ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನೀಡಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಮುಖ್ಯಮಂತ್ರಿ ಪದಕ ನೀಡುವಂತೆ ಒತ್ತಾಯಿಸಿದ್ದರು. ಮನವಿಗೆ ಸ್ಪಂದಿಸಿದ್ದ ಸರ್ಕಾರ 2018 ರಲ್ಲಿ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ 2018 ರಲ್ಲಿ ವಿಧಾನಸಭೆ ಹಾಗೂ 2019 ರಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆ ಪದಕ ವಿತರಣೆ ಮಾಡಿರಲಿಲ್ಲ. 2018 ರಲ್ಲಿ ಸುನಿತಾ ನಿಂಬರಗಿ, 2019ರಲ್ಲಿ ಎ.ವೈ.ಪಾಟೀಲ ಹಾಗೂ ಗುರುನಾಥ ಬಾಯನ್ನವರ ಆಯ್ಕೆಯಾಗಿದ್ದರು.
ಬೆಳಗಾವಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮಣ ನಿಂಬರಗಿ ಅವರ ಸಹೋದರಿ ಸುನಿತಾ ನಿಂಬರಗಿ ಜಿಲ್ಲೆಯ ಸವದತ್ತಿ ವಲಯ ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅರಣ್ಯ ಇಲಾಖೆಯಲ್ಲಿ ಮೊದಲ ಬಾರಿಗೆ ನೀಡಲಾದ ಮುಖಂತ್ರಿಗಳ ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.