ಬೆಳಗಾವಿ: ಡಿ.4ರಿಂದ 15ರ ವರೆಗೆ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ಬಂದೋಬಸ್ತ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಸಿಬ್ಬಂದಿ ಉಳಿದುಕೊಳ್ಳಲು ಬೃಹದಾಕಾರದ ಜರ್ಮನ್ ಟೆಂಟ್ಗಳಿಂದ ಟೌನ್ಶಿಪ್ಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ನಿರ್ಮಿಸಲಾಗಿರುವ ಜರ್ಮನ್ ಟೆಂಟ್ ವ್ಯವಸ್ಥೆ ಹೇಗಿದೆ, ಪೊಲೀಸರು ಏನಂತಾರೆ. ಇಲ್ಲಿದೆ ಮಾಹಿತಿ.
ಹೌದು, ಸುವರ್ಣ ವಿಧಾನಸೌಧ ಸಮೀಪದ ಅಲಾರವಾಡ ಗ್ರಾಮದ ಹೊರವಲಯದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಟೌನ್ಶಿಪ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ನಾಲ್ಕು ದೊಡ್ಡ ದೊಡ್ಡ ಜರ್ಮನ್ ಟೆಂಟ್ ಹಾಕಿ ಒಂದು ಚಿಕ್ಕ ಟೆಂಟ್ ಹಾಕಿ ಟೌನ್ಶಿಪ್ ನಿರ್ಮಿಸಲಾಗಿದೆ. ಒಂದು ಜರ್ಮನ್ ಟೆಂಟ್ 100 ಅಡಿ ಅಗಲ, 200 ಅಡಿ ಉದ್ದ ಗಾತ್ರ ಹೊಂದಿದ್ದು, ಇದೇ ಮಾದರಿಯ ಒಟ್ಟು ನಾಲ್ಕು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳಿಗೆ ಒಂದು ಸಣ್ಣ ಟೆಂಟ್ ಕೂಡ ನಿರ್ಮಿಸಲಾಗಿದೆ. ಇನ್ನು ಒಂದೊಂದು ಟೌನ್ಶಿಪ್ನಲ್ಲಿ ಐನೂರು ಜನ ಸಿಬ್ಬಂದಿಗೆ ಮಲಗಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 2000 ಜನ ಪೊಲೀಸ್ ಸಿಬ್ಬಂದಿ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಾಟ್, ಗಾದೆ, ತಲೆ ದಿಂಬು, ಬೆಡ್ಶೀಟ್ ನೀಡಲಾಗಿದೆ.
ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಪೊಲೀಸ್ ಸಿಬ್ಬಂದಿ, ತುಂಬಾ ಚಳಿ ಇದ್ದ ಕಾರಣ ನಿನ್ನೆ ರಾತ್ರಿ ಬಹಳ ಸಮಸ್ಯೆ ಆಯಿತು. ಹಿಮಾಚಲಪ್ರದೇಶದಂತೆ ನಮಗೆ ಅನುಭವ ಆಗುತ್ತಿದೆ. ಈ ಜರ್ಮನ್ ಟೆಂಟ್ನಲ್ಲಿ ನಮಗೆ ಹೊದಿಕೆ ಕೊಟ್ಟಿಲ್ಲ. ವಯಸ್ಸಾದವರಿಗೆ ತುಂಬಾ ಅನಾನುಕೂಲ ಆಗುತ್ತಿದೆ. ಆರೋಗ್ಯ ವ್ಯವಸ್ಥೆ, ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಬೇಕು. ಇನ್ನೂ ಹೆಚ್ಚಿನ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು.
ಮತ್ತೋರ್ವ ಪೊಲೀಸ್ ಸಿಬ್ಬಂದಿ ಮಾತನಾಡಿ, ದೊಡ್ಡ ಟೆಂಟ್ ಹಾಕಿದ್ದರಿಂದ ಬಹಳ ಚಳಿ ಹತ್ತುತ್ತಿದೆ. ಆದರೆ, ಇದರಲ್ಲೇ ಕಂಫರ್ಟ್ ಮಾಡಿದರೆ ಸ್ವಲ್ಪ ಚಳಿ ಕಡಿಮೆ ಆಗುತ್ತಿತ್ತು. ನಿನ್ನೆ ರಾತ್ರಿ ಇಬ್ಬನಿ ಬಿದ್ದು ಬೆಡ್ ಎಲ್ಲಾ ತೋಯ್ದಿತ್ತು. ಇನ್ನು ಟೆಂಟ್ ಒಳಗೆ ಕುಡಿಯುವ ನೀರಿನ ಕ್ಯಾನ್ ಇಡಬೇಕು. ಬಿಸಿನೀರು ನೀಡಬೇಕು. ಊಟದ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ ಎಂದರು.
ಇದು ಸಂಪೂರ್ಣ ವಾಟರ್ ಪ್ರೂಫ್ ಟೆಂಟ್ ಆಗಿದ್ದು, ಮಳೆ ಬಂದರೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಇಲ್ಲಿ ನೋಡಿದರೆ ಚಳಿಗೆ ಈ ಟೆಂಟ್ನಲ್ಲಿ ಹಿಮದಿಂದ ಪೊಲೀಸರು ತತ್ತರಿಸಿ ಹೋಗಿದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಪರಿಶೀಲಿಸಿ ಅಧಿವೇಶನದ ಬಂದೋಬಸ್ತ್ಗೆ ಬಂದಿರುವ ಪೊಲೀಸರ ಆರೋಗ್ಯದ ಹಿತ ಕಾಪಾಡುವ ಕೆಲಸ ಮಾಡಲಿ ಎಂಬುದು ನಮ್ಮ ಆಶಯ.
ಇದನ್ನೂ ಓದಿ: ಸುವರ್ಣ ವಿಧಾನಸೌಧದ ಅಂದ ಹೆಚ್ಚಿಸಲಿವೆ ಚನ್ನಮ್ಮ, ರಾಯಣ್ಣ, ಅಂಬೇಡ್ಕರ್ ಪ್ರತಿಮೆಗಳು!