ಬೆಳಗಾವಿ: ಕಳೆದ ಮೂರು ದಿನಗಳಿಂದ ನಿಷೇಧಿತ ಪಿಎಫ್ಐನ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ದೇಶಾದ್ಯಂತ ಪಿಎಫ್ಐ ಕಚೇರಿ ಮೇಲಿನ ದಾಳಿಯನ್ನು ಖಂಡಿಸಿ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಹೊರವಲಯದಲ್ಲಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಯ ಮುಂದಾಳತ್ವವನ್ನು ಬೆಳಗಾವಿ ಪಿಎಫ್ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ವಹಿಸಿದ್ದರು.
ಇದನ್ನೂ ಓದಿ: ಮಂಗಳೂರು: ಪಿಎಫ್ಐ ಸೇರಿದಂತೆ 12 ಕಚೇರಿಗಳಿಗೆ ಬೀಗಮುದ್ರೆ
ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿದ ಆರೋಪದ ಜೊತೆಗೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದ ಪಿಎಫ್ಐ, ಎಸ್ಡಿಪಿಐ ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ಬೆಳಗಾವಿ ಪೊಲೀಸರು ಎರಡು ದಿನಗಳ ಹಿಂದೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದರು. ದಾಳಿ ವೇಳೆ ಬೆಳಗಾವಿ ನಗರದಲ್ಲಿ ಏಳು ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಓರ್ವ ಸೇರಿ ಎಂಟು ಜನರನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕುಳುಹಿಸಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ 7 ಮಂದಿ ಪಿಎಫ್ಐ ಮುಖಂಡರ ಬಂಧನ: ಆರೋಪಿಗಳು ಹಿಂಡಲಗಾ ಜೈಲಿಗೆ ಶಿಫ್ಟ್
ಆದ್ರೆ, ಬೆಳಗಾವಿ ಪೊಲೀಸರ ದಾಳಿ ದಿನವೇ ನಾಪತ್ತೆ ಆಗಿರುವ ಪಿಎಫ್ಐ ಜಿಲ್ಲಾಧ್ಯಕ್ಷ ನವೀದ್ ಕಟಗಿ ಈವರೆಗೂ ಪತ್ತೆಯಾಗಿಲ್ಲ. ನವೀದ್ ಕಟಗಿ ಬಂಧನಕ್ಕೆ ಬಲೆ ಬೀಸಿರುವ ಬೆಳಗಾವಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ಮಹಾರಾಷ್ಟ್ರ, ಗೋವಾ ರಾಜ್ಯದಲ್ಲಿ ಹುಡುಕಾಟ ನಡೆಸಿದ್ದಾರೆ.