ಬೆಳಗಾವಿ: ಹಿಂದೂತ್ವದ ಬಗ್ಗೆ ಮಾತನಾಡುವ ಮೋದಿಯವರೇ ಭಗವಾ ಧ್ವಜದ ಮೇಲೇಕೆ ನಿಮಗೆ ಗೌರವವಿಲ್ಲ. ಜಗತ್ತಿನ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬೆಳಗಾವಿ ಮರಾಠಿ ಭಾಷಿಕರ ಸಮಸ್ಯೆ ಪರಿಹರಿಸಲು ಗಮನ ಹರಿಸಿ ಎಂದು ಶಿವಸೇನೆ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಹೇಳಿದರು.
ನಗರದ ಖಡೇಬಜಾರ್ ವೃತ್ತದಲ್ಲಿ ಎಂಇಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾವುತ್, ಗಡಿ ಹೋರಾಟಕ್ಕೆ ಶಿವಸೇನೆಯ ಕಾರ್ಯಕರ್ತರು 69 ಹುತಾತ್ಮರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಪಶ್ಚಿಮ ಬಂಗಾಳದಲ್ಲಿ ಪರಿವರ್ತನೆ ಬೇಕು. ಬಂಗಾಳ ಬಿಟ್ಟು ಕರ್ನಾಟಕದಲ್ಲಿ ಮರಾಠಿ ಭಾಷಿಕರಿಗೆ ಆಗುತ್ತಿರುವ ಅನ್ಯಾಯ ನೋಡಿ. ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ, ಅನ್ಯಾಯಗಳು ನಿರಂತರವಾಗಿ ನಡೆಯುತ್ತಿವೆ. ಬಂಗಾಳದ ಪ್ರೀತಿಯನ್ನು ಕರ್ನಾಟಕದ ಮೇಲೂ ತೋರಿಸಿ. ಕರ್ನಾಟಕದ ವಿಚಾರದಲ್ಲಿ ಮೋದಿಯವರೇ ಮೌನ ವಹಿಸಿರುವುದೇಕೆ?. ಕರ್ನಾಟಕದಲ್ಲಿ ನಿಮ್ಮ ಸರ್ಕಾರವಿದೆ ಎಂದು ಮೌನವೇ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರೆ ನೀವು ನ್ಯಾಯದ ಪರವಾಗಿದ್ರೆ ಇಲ್ಲಿನ ಜನರಿಗೆ ನ್ಯಾಯ ಕೊಡಿಸಬೇಕು. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡುವುದನ್ನು ನಿಲ್ಲಿಸಿದ್ರೆ ಏನಾಗಬಹುದು ಗೊತ್ತೆ?. ಅಂಥ ಪರಿಸ್ಥಿತಿಯನ್ನು ನೀವು ನಿರ್ಮಾಣ ಮಾಡಬೇಡಿ ಎಂದು ರಾವುತ್ ಕೀಳುಮಟ್ಟದ ರಾಜಕೀಯ ಭಾಷಣ ಮಾಡಿದರು.
ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಭಗವಾಧ್ವಜ ತೆರವು ಮಾಡಲಾಗಿದೆ. ಬೆಳಗಾವಿ ಕ್ಷೇತ್ರದಲ್ಲಿ ಎಂಇಎಸ್ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮರಾಠಿ ಭಾಷಿಕರೆಲ್ಲರೂ ಒಂದಾಗಬೇಕು. ಶುಭಂ ಶಳಕೆ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಇಲ್ಲವಾದ್ರೆ ಅದೃಷ್ಟ ಕಳೆದೊಗುತ್ತದೆ ಎಂದರು.
ಕೊಲ್ಲಾಪುರ ಸಂಸದ ಧೈರ್ಯಶೀಲ ಮಾನೆ ಮಾತನಾಡಿ, ಎಂಇಎಸ್ ಅಭ್ಯರ್ಥಿ ಶುಭಂ ಗೆಲುವಿಗೆ ಯೋಗ ಕೂಡಿ ಬಂದಿದೆ. ಶುಭಂ ಶೆಳಕೆ ಪರ ಮಹಾರಾಷ್ಟ್ರ ಜನತೆ ಹಾಗೂ ಬೆಳಗಾವಿ ಕ್ಷೇತ್ರದ ಮರಾಠಿ ಭಾಷಿಕರಿದ್ದಾರೆ. ಮರಾಠಿ ಜನರ ಅಸ್ಮಿತೆಗಾಗಿ ನಡೆಯುತ್ತಿರುವ ಚುನಾವಣೆಗ ಶಿವಸೇನೆ ಬೆಂಬಲ ಇದ್ದು, ಶುಭಂ ಗೆಲುವಿಗೆ ಸಹಕಾರಿಯಾಗಲಿದೆ. ಕೊನೆ ಉಸಿರಿರುವರೆಗೆ ಇಲ್ಲಿನ ಮರಾಠಿ ಭಾಷಿಕರ ಜೊತೆಗೆ ನಾವಿರುತ್ತೇವೆ. ಮರಾಠಿ ಭಾಷಿಕರೆಂಬ ಸೊಕ್ಕು ನಮಗಿಲ್ಲ, ಮರಾಠಿಗರೆಂಬ ಗರ್ವ ನಮಗಿದೆ ಎಂದರು.