ಬೆಳಗಾವಿ : ರಾಜ್ಯಕ್ಕೆ ನೀಡಬೇಕಿದ್ದ ನೆರೆ ಪರಿಹಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಡಿಸಿಎಂ ಡಿಸಿಎಂ ಲಕ್ಷ್ಮಣ್ ಸವದಿ, ಪ್ರವಾಹದ ಬಗ್ಗೆ ಮಾಡಿರುವ ರಾಜ್ಯ ವರದಿ ಹಾಗೂ ಕೇಂದ್ರ ಅಧ್ಯಯನ ತಂಡದ ವರದಿ ಹೊಂದಾಣಿಕೆ ಆಗುತ್ತಿಲ್ಲ. ಈ ಕಾರಣಕ್ಕೆ ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ. ಈ ಕುರಿತು ನಮ್ಮ ಅಧಿಕಾರಿಗಳ ತಂಡ ಸ್ಪಷ್ಟೀಕರಣ ನೀಡಲು ದೆಹಲಿಗೆ ತೆರಳಲಿದೆ ಹಾಗೂ ಪರಿಹಾರದ ಪ್ರಸ್ತಾವವನ್ನು ಮತ್ತೊಮ್ಮೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
ನೆರೆ ಪರಿಹಾರ ವಿತರಣೆ ಪರಿಶೀಲನೆ ಸಭೆಯಲ್ಲಿ ಸಿಎಂ ಸರ್ಕಾರದ ಖಜಾನೆ ಖಾಲಿ ಆಗಿದೆ ಎಂಬ ಹೇಳಿಕೆ ಬೆನ್ನಲ್ಲೇ ಪರಿಹಾರ ಕೇಳಲು ಹೋದ ರೈತರಿಗೂ ಸಹ ಸಿಎಂ ಸ್ಪಂದಿಸಿಲ್ಲ. ಕಳೆದ ರಾತ್ರಿ ಬೆಳಗಾವಿಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿರುವ ಸಿಎಂರನ್ನು ಭೇಟಿಯಾಗಿದ್ದ ರೈತ ಮುಖಂಡರು, ಎಕರೆಗೆ ಐವತ್ತು ಸಾವಿರದಿಂದ ಒಂದು ಲಕ್ಷ ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಿಎಂ ಕೇಂದ್ರ ಸರ್ಕಾರದ ಎನ್‌ಡಿಆರ್ ಪ್ರಕಾರ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ರೈತರು ವಿರೋಧ ಮಾಡುತ್ತಿದ್ದಂತೆ ಅಡ್ಡ ಬಂದ ಡಿಸಿಎಂ ಲಕ್ಷ್ಮಣ ಸವದಿ, ನನ್ನದು ನೂರು ಎಕರೆ ಜಮೀನು ಇದೆ. ಅಷ್ಟಕ್ಕೂ ಪರಿಹಾರ ನೀಡಿದ್ರೆ ಒಂದು ಕೋಟಿ ಆಗುತ್ತೆ ಎಂದು ಡಿಸಿಎಂ ಉಡಾಫೆ ಉತ್ತರ ನೀಡಿದ್ದಾರೆ. ಡಿಸಿಎಂ ಈ ಹೇಳಿಕೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ನಾವೇನೂ ಮಾಡಲು ಆಗಲ್ಲ. ಕೇಂದ್ರ ಸರ್ಕಾರದಿಂದ ಪರಿಹಾರ ಬರುವವರೆಗೂ ಕಾಯಿರಿ ಎಂದು ಸಿಎಂ ರೈತರಿಗೆ ಸಮಜಾಯಿಷಿ ನೀಡಿದ ಬೆನ್ನಲ್ಲೇ ರೈತ ಮುಖಂಡರು ಸಿಎಂ ಹಾಗೂ ಡಿಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಸಿಎಂ ಭೇಟಿ ನೀಡುವ ಕಡೆಗಳೆಲ್ಲಾ ರೈತರು ಘೇರಾವ್ ಹಾಕಿ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹಾಕಲಿದ್ದಾರೆ.