ಬೆಳಗಾವಿ: ಹೊಸದಾಗಿ ರೈತರ ಕೃಷಿ ಪಂಪಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಕ್ರಮ ಸಕ್ರಮ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿರುವುದಕ್ಕೆ ಬೆಳಗಾವಿ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಒಮ್ಮೆ ನೆರೆ, ಮತ್ತೊಮ್ಮೆ ಬರದಿಂದಾಗಿ ರಾಜ್ಯದ ರೈತರ ಸ್ಥಿತಿ ಹದಗೆಟ್ಟಿರುವ ಈ ಸಂದರ್ಭದಲ್ಲಿ, ಸರ್ಕಾರ ಕೈಗೊಂಡಿರುವ ಈ ನಿರ್ಣಯವನ್ನು ವಾಪಸ್ ಪಡೆಯಬೇಕೆಂದು ರೈತರು ಆಗ್ರಹಿಸಿದ್ದಾರೆ.
ರಾಜ್ಯಾದ್ಯಂತ ವಿವಿಧ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿರುವ ರೈತರ ಒಟ್ಟು 2 ಲಕ್ಷ ಅಕ್ರಮ ಕೃಷಿ ಪಂಪ್ಸೆಟ್ ಗಳನ್ನು ಸಕ್ರಮಗೊಳಿಸಲು 6,099 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 2015 ರಿಂದ 22 ಸೆಪ್ಟೆಂಬರ್ 2023ರ ವರೆಗೆ ಈಗಾಗಲೇ ಚಾಲ್ತಿಯಲ್ಲಿರುವ ಐಪಿ ಸೆಟ್ ಗಳು ಸಕ್ರಮ ವ್ಯಾಪ್ತಿಗೆ ಬರುತ್ತವೆ. ಆದರೆ, 23 ಸೆಪ್ಟೆಂಬರ್ 2023 ರ ನಂತರ ಕೃಷಿ ಪಂಪ್ಸೆಟ್ ಗಳಿಗೆ ಯಾರಾದರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದರೆ ಸಕ್ರಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ತೀರ್ಮಾನ ಕೈಗೊಂಡಿದೆ.
ಈ ಮೊದಲು ರೈತರು ಕೊರೆಸುವಂತಹ ಕೊಳವೆ ಬಾವಿಗಳಿಗೆ 500 ಮೀಟರ್ ವರೆಗೆ ಸಂಪರ್ಕ ಕಲ್ಪಿಸುವ ಉಚಿತ ಯೋಜನೆ ಅದಾಗಿತ್ತು. ರೈತರು ಅಕ್ರಮ ಸಕ್ರಮದ ಅಡಿಯಲ್ಲಿ 24 ಸಾವಿರ ರೂ. ತುಂಬಿದರೆ ಅರ್ಧ ಕಿ.ಮೀ. ವರೆಗೆ ವಿದ್ಯುತ್ ಕಲ್ಪಿಸಲು ಕಂಬಗಳು, ತಂತಿ, ಟಿಸಿ, ಹಾಗೂ ಅದಕ್ಕೆ ತಗಲುವಂತಹ ವೆಚ್ಛವನ್ನು ಭರಿಸಿ ರೈತರಿಗೆ ಸರ್ಕಾರವೇ ವಿದ್ಯುತ್ ನೀಡುತ್ತಿತ್ತು. ಆದರೆ, ಈಗ ಸರ್ಕಾರ ಈ ಯೋಜನೆ ಕೈಬಿಟ್ಟಿರುವುದರಿಂದ ವಿದ್ಯುತ್ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ರೈತ ಮುಖಂಡ ಮಹಾಂತೇಶ ಕಮತ, "ಕಳೆದ 15 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೋವಿಡ್ ಸೇರಿ ಅನೇಕ ಕಾರಣಗಳಿಂದ ರೈತನ ಸ್ಥಿತಿ ಚಿಂತಾಜನಕವಾಗಿದೆ. 23 ಲಕ್ಷ ಖರ್ಚು ಮಾಡಿ ವಿದ್ಯುತ್ ಪಡೆಯುವ ಶಕ್ತಿ ರೈತನಿಗಿಲ್ಲ. ತಕ್ಷಣವೇ ಸರ್ಕಾರ ತನ್ನ ಆದೇಶ ಹಿಂಪಡೆದು, ಹಿಂದಿನಂತೆ ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಯೋಜನೆ ಮುಂದುವರಿಸಬೇಕು" ಎಂದು ಒತ್ತಾಯಿಸಿದ್ದಾರೆ.
ರೈತ ಮುಖಂಡ ಭೀರಪ್ಪ ದೇಶನೂರ ಮಾತನಾಡಿ, "ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಯೋಜನೆ ಕೈ ಬಿಟ್ಟಿರುವುದು ಸರಿಯಲ್ಲ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಚಳಿಗಾಲ ಅಧಿವೇಶನ ವೇಳೆ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕರ್ನಾಟಕ ರಾಜ್ಯ ರೈತ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಮುತ್ತಿಗೆ ಹಾಕಿ, ಪ್ರತಿಭಟನೆ ಮಾಡಬೇಕಾಗುತ್ತದೆ" ಎಂದು ಎಚ್ಚರಿಸಿದರು.
ಇದನ್ನೂ ಓದಿ: ಮಳೆಯ ಅಭಾವದಿಂದ ತಗ್ಗಿದ ಈರುಳ್ಳಿ ಪೂರೈಕೆ: ಗಗನಕ್ಕೇರಿದ ಬೆಲೆ