ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಂದಾಯ, ಆರೋಗ್ಯ, ಪೊಲೀಸರ ಇಲಾಖೆ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸ್ಥಳೀಯ ಸ್ಕ್ಯಾನಿಂಗ್ ಸೆಂಟರ್, ಹೆರಿಗೆ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದೆ ಎಂದು ಬೆಳಗಾವಿ ಡಿಹೆಚ್ಒ ಮಹೇಶ ಕೋಣಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದ ಮಾಹಿತಿ ಗೊತ್ತಾದ ತಕ್ಷಣ ಡಿಸಿ ಗಮನಕ್ಕೆ ತಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸ್ಥಳೀಯ ಸ್ಕ್ಯಾನಿಂಗ್ ಸೆಂಟರ್, ಹೆರಿಗೆ ಆಸ್ಪತ್ರೆಗಳ ಮೇಲೆ ನಿನ್ನೆ ದಾಳಿ ಮಾಡಲಾಗಿದೆ. ವೆಂಕಟೇಶ್ವರ ಮೆಟರ್ನಿಟಿ ಆಸ್ಪತ್ರೆ ಕೃತ್ಯದಲ್ಲಿ ಭಾಗಿಯಾಗಿದೆ ಎಂದು ತಿಳಿಸಿದರು.
ಏಳು ಭ್ರೂಣ ಮೃತದೇಹಗಳು ನಮ್ಮ ಆಸ್ಪತ್ರೆಯದ್ದೇ ಅನ್ನೋದನ್ನು ಅವರು ಒಪ್ಪಿಕೊಂಡಿದ್ದಾರೆ. ತಮ್ಮ ಸಿಬ್ಬಂದಿಯೇ ಕಳೆದ ನಾಲ್ಕು ದಿನಗಳ ಹಿಂದೆ ಭ್ರೂಣಗಳನ್ನು ಎಸೆದಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಆಸ್ಪತ್ರೆ ವಿರುದ್ಧ ಕೇಸ್ ದಾಖಲಿಸಿ ಆಸ್ಪತ್ರೆ ಸೀಜ್ ಮಾಡಿದ್ದೇವೆ ಎಂದರು.
ಸದ್ಯ ಏಳು ಭ್ರೂಣಗಳನ್ನು ಬೆಳಗಾವಿ ಬೀಮ್ಸ್ ವಿಧಿ ವಿಜ್ಞಾನ ಕೇಂದ್ರದಲ್ಲಿ ಇರಿಸಲಾಗಿದೆ. ಪ್ರಯೋಗಾಲಯದ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ವೈದ್ಯರ ವಿರುದ್ಧ ಕ್ರಮಕ್ಕೆ ಡಿಸಿ ಅವರ ಜೊತೆಗೆ ಚರ್ಚೆ ಮಾಡಿದ್ದೇನೆ. ವೈದ್ಯರ ವಿರುದ್ಧ ಪಿಸಿಪಿಐ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣ ಪ್ರೂವ್ ಆದರೆ ವೈದ್ಯರಿಗೆ ಆರರಿಂದ ಎಳು ವರ್ಷ ಶಿಕ್ಷೆ ಆಗುತ್ತದೆ ಎಂದರು.
ಘಟನೆಗೆ ನೋಡಲ್ ಅಧಿಕಾರಿ ನಿರ್ಲಕ್ಷ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಡಿಸಿ ಜೊತೆ ಚರ್ಚೆ ಮಾಡಿದ್ದೇನೆ. ಪ್ರತಿಯೊಂದು ಆಸ್ಪತ್ರೆಯ ಒಂದು ವರ್ಷದ ರೆಕಾರ್ಡ್ ತರಿಸಿಕೊಳ್ಳುತ್ತೇನೆ. ನೋಡಲ್ ಆಫೀಸರ್ ಒಂದು ವರ್ಷದಲ್ಲಿ ಎಷ್ಟು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆಂದು ಪರಿಶೀಲನೆ ಮಾಡಲಾಗುತ್ತದೆ. ನೋಡಲ್ ಅಧಿಕಾರಿ ಮೂರು ತಿಂಗಳಿಗೊಮ್ಮೆ ಆಸ್ಪತ್ರೆಗೆ ಭೇಟಿ ನೀಡಬೇಕೆಂಬ ನಿಯಮವಿದೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಮೂಡಲಗಿ ಪಟ್ಟಣದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ ಡಿಎಚ್‌ಒ..!
ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಇಂದು ಸಹ ದಾಳಿ ನಡೆಸಲಾಗುತ್ತಿದೆ. ದಾಖಲೆಗಳ ಪರಿಶೀಲನೆ ವೇಳೆ ಲೋಪದೋಷ ಕಂಡುಬಂದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದೇನೆ ಎಂದರು. ಹೆಣ್ಣು ಭ್ರೂಣಗಳು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆಯೂ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದರು.