ಬೆಳಗಾವಿ: ರಾಜ್ಯೋತ್ಸವದ ಪ್ರತಿಯಾಗಿ ಎಂಇಎಸ್ ಸಂಘಟಿಸುತ್ತಿದ್ದ ಕರಾಳ ದಿನಾಚರಣೆ ಮೆರವಣಿಗೆಗೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.
ಹಲವು ವರ್ಷಗಳಿಂದ ಜಿಲ್ಲಾಡಳಿತ ಎಂಇಎಸ್ಗೆ ಅನುಮತಿ ನೀಡುತ್ತಾ ಬಂದಿತ್ತು. ಪದೇ ಪದೆ ಎಂಇಎಸ್ ಮುಖಂಡರು ಷರತ್ತುಗಳನ್ನು ಉಲ್ಲಂಘಿಸುತ್ತಲೇ ಬಂದಿದ್ದಾರೆ. ಈ ಸಲವೂ ಕರಾಳ ದಿನ ಆಚರಿಸಲು ಎಂಇಎಸ್ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಜಿಲ್ಲಾಡಳಿತದ ಮಾರ್ಗಸೂಚಿ ಪಾಲಿಸದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಇಂಇಎಸ್ ಕರಾಳ ದಿನದ ರ‍್ಯಾಲಿಗೆ ಅನುಮತಿ ನೀಡಿಲ್ಲ.
ಹೀಗಾಗಿ ಕಪ್ಪು ಪಟ್ಟಿ ಧರಿಸಿ ಉದ್ಧತಟನ ಪ್ರದರ್ಶಿಸುತ್ತಿದ್ದ ಎಂಇಎಸ್ಗೆ ಜಿಲ್ಲಾಡಳಿತದ ತೀರ್ಮಾನ ತೀವ್ರ ಮುಖಭಂಗ ತರಿಸಿದೆ. ಎಂಇಎಸ್ ಕಾರ್ಯಕರ್ತರಿಗೆ ಮೆರವಣಿಗೆ ನಡೆಸಲು ಅನುಮತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಕರಾಳ ದಿನ ಆಚರಿಸಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಕಂಗೆಟ್ಟಿರುವ ಎಂಇಎಸ್ ಮುಖಂಡರು ಮರಾಠ ಮಂಡಳ ಕಾರ್ಯಾಲಯದಲ್ಲಿ ನಾಳೆ ಸಭೆ ನಡೆಸಲಿದ್ದಾರೆ. ಕೇವಲ 20 ಜನ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂದು ಎಂಇಎಸ್ ಮೂಲಗಳು ತಿಳಿಸಿವೆ. ಆದರೆ, ಸಭೆ ನಡೆಸಲು ಕೂಡ ಜಿಲ್ಲಾಡಳಿತ ಅನುಮತಿ ನೀಡಿಲ್ಲ.