ಬೆಳಗಾವಿ: ಜಿಲ್ಲೆಯಲ್ಲಿ ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟಾರೆ 3,925 ಬೆಡ್ಗಳು ಲಭ್ಯವಿದೆ. ಇದರಲ್ಲಿ ಶೇ.50 ರಷ್ಟು ಬೆಡ್‌ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾಡಳಿತದ ಸುಪರ್ದಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ತಜ್ಞರ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲಭ್ಯವಿರುವ 3925 ಬೆಡ್ಗಳ ಪೈಕಿ ಶೇ.50 ರಷ್ಟು ಬೆಡ್‌ಗಳನ್ನು ಅಂದರೆ ಸುಮಾರು 2000 ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಬೇಕಾಗುತ್ತದೆ. ಆದರೆ ಇದುವರೆಗೆ ಕೇವಲ 641 ಬೆಡ್‌ಗಳನ್ನು ಮಾತ್ರ ಮೀಸಲಿಡಲಾಗಿದೆ. ಸದ್ಯಕ್ಕೆ ಈ ಬೆಡ್ಗಳು ಸಾಕಾಗಬಹುದು. ಆದರೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದರಿಂದ ಮುಂದಿನ ವಾರದೊಳಗೆ ಉಳಿದ ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟು ಜಿಲ್ಲಾಡಳಿತಕ್ಕೆ ನೀಡಬೇಕು ಎಂದು ತಿಳಿಸಿದರು.
ಆಕ್ಸಿಜನ್ ಕೊರತೆ ಇಲ್ಲ, ಹೆಚ್ಚುವರಿ ಪೂರೈಕೆಗೆ ಕ್ರಮ: ಜಿಲ್ಲೆಯಲ್ಲಿ ಸದ್ಯಕ್ಕೆ ಆಕ್ಸಿಜನ್ ಕೊರತೆ ಕಂಡುಬಂದಿಲ್ಲ. ಆದಾಗ್ಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಮುಂಜಾಗ್ರತಾ ಕ್ರಮವಾಗಿ ಆಕ್ಸಿಜನ್ ಏಜೆನ್ಸಿ ಮತ್ತು ಪೂರೈಕೆದಾರರನ್ನು ಗುರುತಿಸಿ ಇನ್ನೂ ಹೆಚ್ವಿನ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಾಳಸಂತೆಯಲ್ಲಿ ರೆಮಿಡಿಸಿವಿರ್ ಮಾರಾಟ ತಡೆಗೆ ಕ್ರಮ: ರಾಜ್ಯದ ಕೆಲವು ಕಡೆಗಳಲ್ಲಿ ವರದಿಯಾಗಿರುವಂತೆ ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕೊರತೆ ಇಲ್ಲ. ವೈದ್ಯರ ಶಿಫಾರಸ್ಸಿನಂತೆ ಅಗತ್ಯವಿರುವ ರೋಗಿಗಳಿಗೆ ರೆಮಿಡಿಸಿವಿರ್ ಪೂರೈಕೆಗೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ರಚಿಸಲಾಗಿರುತ್ತದೆ. ಆದರೆ ಸದರಿ ಔಷಧಿಯು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟಲು ಈಗಾಗಲೇ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.