ಚಿಕ್ಕೋಡಿ: ಚಿಕ್ಕೋಡಿ ಉಪವಿಭಾಗದಲ್ಲಿ ಕೃಷ್ಣಾ ಸೇರಿದಂತೆ ಎಲ್ಲ ನದಿಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿರುವುದರಿಂದ ಮುಳುಗಡೆ ಭೀತಿ ಎದುರಿಸುತ್ತಿರುವ ನದಿತೀರದ ಗ್ರಾಮಗಳ ಜನರನ್ನು ಮುಂಜಾಗ್ರತಾ ಕ್ರಮವಾಗಿ ಪರಿಹಾರ (ಕಾಳಜಿ) ಕೇಂದ್ರಗಳಿಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಸೂಚನೆ ನೀಡಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಲೋಕೋಪಯೋಗಿ ಇಲಾಖೆಯ ಸಭಾಂಗಣದಲ್ಲಿ ನಡೆದ ಚಿಕ್ಕೋಡಿ ಉಪ ವಿಭಾಗದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾಗುತ್ತಿವೆ. ಆದ್ದರಿಂದ ನದಿಗಳ ಒಳಹರಿವು ಆಧರಿಸಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗುತ್ತದೆ.
ನೀರು ಬಿಡುಗಡೆಯಿಂದ ನದಿತೀರದ ಕೆಲ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗುವುದರಿಂದ ಅಂತಹ ಗ್ರಾಮಗಳ ಜನರು ಮತ್ತು ತೋಟದ ಮನೆಗಳಲ್ಲಿ ಇರುವ ಜನರು ಮತ್ತು ಜಾನುವಾರುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೆರೆಯ ರಾಜ್ಯದ ಜಲಾಶಯಗಳ ಮಟ್ಟ ಮತ್ತು ನೀರು ಬಿಡುಗಡೆಯ ಕುರಿತು ನಿರಂತರವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ನೀರು ಬಿಡುಗಡೆ ಬಗ್ಗೆ ಮುಂಚಿತವಾಗಿ ಮಾಹಿತಿ ದೊರೆತ ತಕ್ಷಣ ಬಾಧಿತಗೊಳ್ಳುವ ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ನೀರು ಕಡಿಮೆಯಾದ ಬಳಿಕ ಮತ್ತೆ ಅವರನ್ನು ಅವರ ಗ್ರಾಮಗಳಿಗೆ ವಾಪಸ್ ಕಳುಹಿಸಬಹುದು ಎಂದರು.
ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಮಾತನಾಡಿ, ಪ್ರವಾಹ ಭೀತಿ ಎದುರಿಸುತ್ತಿರುವ ನದಿ ತೀರದ ಗ್ರಾಮಗಳ ಜನರನ್ನು ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಥಳಾಂತರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಆರಂಭಿಸಲಾಗಿದ್ದ ಬಹುತೇಕ ಕಡೆಗಳಲ್ಲೂ ಪರಿಹಾರ ಕೇಂದ್ರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ನೀರು ಬಿಡುಗಡೆ ಮಾಹಿತಿಯನ್ನು ಆಧರಿಸಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿಕ್ಕೋಡಿ ಉಪ ವಿಭಾಗದ ತಹಶೀಲ್ದಾರರು, ತಾಲ್ಲೂಕು ನೋಡಲ್ ಅಧಿಕಾರಿಗಳು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.