ಬೆಳಗಾವಿ: ಕಬಲಾಪುರದಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ದಂಪತಿಯನ್ನ ಎನ್ಡಿಆರ್ಎಫ್ ತಂಡ ಬೋಟ್ ಮೂಲಕ ರಕ್ಷಣೆ ಮಾಡಿದೆ.
ಕಬಲಾಪುರ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ತೋಟದ ಮನೆಗೆ ಹೋಗಿದ್ದ ದಂಪತಿ ನೀರಿನ ಮಧ್ಯೆ ಸಿಲುಕಿಕೊಂಡಿದ್ದರು. ರೈತ ಕಾಡಪ್ಪ, ಪತ್ನಿ ರತ್ನವ್ವ ಜಲಾವೃತವಾಗಿರುವ ಮನೆಯ ಮೇಲೆ ಏರಿ ಕುಳಿತಿದ್ದರು.
ಬೆಳಗಾವಿ ನಗರದ ಸಂಪೂರ್ಣ ನೀರು ಹರಿದು ಹೋಗುವ ಬಳ್ಳಾರಿ ನಾಲಾ ಈ ತೋಟದ ಮನೆಯನ್ನು ಸುತ್ತುವರೆದಿತ್ತು. ಎನ್ಡಿಆರ್ಎಫ್, ಅಗ್ನಿಶಾಮಕ ದಳ ನೀರಿನ ಸೆಳೆತ ಕಡಿಮೆಯಾಗುವವರೆಗೂ ನಾವು ಏನೂ ಮಾಡಲು ಆಗುವುದಿಲ್ಲ ಎಂದಿದ್ದರು.
ಹೀಗಾಗಿ ಕೇಂದ್ರದಿಂದ ಹೆಲಿಕಾಪ್ಟರ್ ನೆರವಿಗಾಗಿ ಸಿಎಂ ಬಿ.ಎಸ್.ಎಡಿಯೂರಪ್ಪ ಮನವಿ ಮಾಡಿದ್ದರು. ಸಂಜೆಯೊಳಗಾಗಿ ರಕ್ಷಣೆ ಮಾಡುವುದಾಗಿ ತಿಳಿಸಿದ್ದರು. ಆದರೆ ಸಾಹಸ ಮೆರೆದ ಎನ್ಡಿಆರ್ಎಫ್, ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ, ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ದಂಪತಿಯನ್ನ ರಕ್ಷಣೆ ಮಾಡಲಾಗಿದೆ.
ಮೂರು ದಿನದಿಂದ ಊಟ, ಉಪಹಾರವಿಲ್ಲದೇ ನೀರಿನ ಮಧ್ಯೆ ಸಿಲುಕಿ ಪರದಾಟ ನಡೆಸಿದ್ದ ದಂಪತಿಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.