ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆ ಎದುರು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಕನ್ನಡ ಧ್ವಜಸ್ತಂಭವನ್ನು ಇದೀಗ ಮತ್ತಷ್ಟು ಸುಭದ್ರಗೊಳಿಸಲಾಗಿದೆ. ಪಾಲಿಕೆ ಎದುರು ಮೂರು ಅಡಿ ಆಳವಾದ ತೆಗ್ಗು ತೆಗೆದು ಧ್ವಜಸ್ತಂಭ ಅಳವಡಿಸಲಾಯಿತು.
ರಾತ್ರಿ 9.30 ರಿಂದ 10.30ರವರೆಗೆ ಕನ್ನಡ ಸಂಘಟನೆ ಕಾರ್ಯಕರ್ತರು ಒಂದು ಗಂಟೆಯ ಕಾಲ ಮಿಂಚಿನ ಕಾರ್ಯಾಚರಣೆ ನಡೆಸಿ ಧ್ವಜಸ್ತಂಭ ಭದ್ರಗೊಳಿಸಿದರು. ಡಿಗ್ಗಿಂಗ್ ಯಂತ್ರದ ಮೂಲಕ ಮೂರಡಿ ಆಳದ ತೆಗ್ಗು ತೆಗೆಯಲಾಯಿತು. ಬಳಿಕ ಧ್ವಜಸ್ತಂಭ ಕುಣಿಯಲ್ಲಿ ಇಳಿಸಿ ಸಿಮೆಂಟ್ ಕಾಂಕ್ರೀಟ್‌ನಿಂದ ಭದ್ರಗೊಳಿಸಲಾಯಿತು. ನೆಲದಿಂದ ಎರಡು ಅಡಿ ಸಿಮೆಂಟ್‌ನಿಂದ ಕಟ್ಟೆ ಕಟ್ಟಲಾಯಿತು. ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳ ಮುಖಂಡರು ಮುಂದೆ ನಿಂತು ಧ್ವಜಸ್ತಂಭ ಸುಭದ್ರಗೊಳಿಸಿದ್ದು ವಿಶೇಷವಾಗಿತ್ತು.
ಎರಡು ದಿನಗಳ ಹಿಂದೆ ಪಾಲಿಕೆ ಎದುರು ಕನ್ನಡ ಹೋರಾಟಗಾರರು ಧ್ವಜಸ್ತಂಭ ಅಳವಡಿಸಲು ಯತ್ನಿಸಿದ್ದರು. ಆಗ ಪೊಲೀಸರು ಧ್ವಜಸ್ತಂಭ ಅಳವಡಿಕೆ ಯತ್ನ ವಿಫಲಗೊಳಿಸಲು ಮುಂದಾದರು. ಧ್ವಜಸ್ತಂಭ ಅಳವಡಿಸಲು ತಂದಿದ್ದ ಮೊಳೆ ಹಾಗೂ ಸುತ್ತಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಆಗ ಪಟ್ಟು ಹಿಡಿದು ಪಾಲಿಕೆ ಎದುರು ತಾತ್ಕಾಲಿಕವಾಗಿ ಧ್ವಜಸ್ತಂಭ ಅಳವಡಿಸಲಾಗಿತ್ತು. ಧ್ವಜಸ್ತಂಭ ತೆರವು ಮಾಡದಂತೆ ಕನ್ನಡ ಹೋರಾಟಗಾರರು ಕಾದು ಕುಳಿತಿದ್ದರು. ಇದೀಗ ಪಾಲಿಕೆ ಎದುರು ಸಿಮೆಂಟ್ ಮೂಲಕ ಕಟ್ಟೆಕಟ್ಟಿ ಧ್ವಜಸ್ತಂಭ ಭದ್ರಗೊಳಿಸಲಾಯಿತು. ಅಲ್ಲದೇ ಇಂದು ರಾತ್ರಿ ಸಹ ಧ್ವಜಸ್ತಂಭ ಕಾಯಲು ಕನ್ನಡ ಸಂಘಟನೆ ಕಾರ್ಯಕರ್ತರು ನಿರ್ಧರಿಸಿದ್ದಾರೆ.
ಓದಿ : ಧ್ವಜಸ್ತಂಭಕ್ಕೆ ಕುವೆಂಪು ಫೋಟೋ ಕಟ್ಟಿ ಕನ್ನಡಪರ ಹೋರಾಟಗಾರರಿಂದ ಪೂಜೆ
ಪಾಲಿಕೆ ಎದುರು ಕನ್ನಡ ಧ್ವಜ ಇರಬೇಕು ಎಂಬ ಕನ್ನಡಿಗರ ಬಹುದಿನದ ಕನಸು ನನಸಾಗಿದೆ. ಅಲ್ಲದೇ ಬೆಳಗಾವಿ ಪಾಲಿಕೆ ಎದುರು ಧ್ವಜಸ್ತಂಭ ಅಳವಡಿಕೆಯೂ ಹೊಸ ಇತಿಹಾಸಕ್ಕೆ ಸೃಷ್ಟಿಸಿದೆ. ಭದ್ರವಾಗಿ ನಿಂತಿರುವ ಧ್ವಜಸ್ತಂಭ ತೆರವಿಗೆ ಜಿಲ್ಲಾಡಳಿತ ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಕನ್ನಡ ಸಂಘಟನೆ ಕಾರ್ಯಕರ್ತರು ಎಚ್ಚರಿಸಿದ್ದಾರೆ.