ಬೆಳಗಾವಿ: ಸಿದ್ದರಾಮಯ್ಯರನ್ನು ಖುಷಿಪಡಿಸಿಲು ನಾನು ಮಂತ್ರಿ ಆಗಿಲ್ಲ. ಜನತಾ ನ್ಯಾಯಾಲಯದಲ್ಲಿ ಗೆದ್ದು ಅರ್ಹ ಶಾಸಕನಾಗಿ ಮಂತ್ರಿ ಆಗಿದ್ದೇನೆ ಎಂದು ಮಾಜಿ ಸಿಎಂ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ಕಿಡಿಕಾರಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕಾನೂನು ಗೊತ್ತಿಲ್ಲ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ. ಆದರೆ ನಾನು 25 ವರ್ಷ ಪೊಲೀಸ್ ವೃತ್ತಿ ನಿರ್ವಹಿಸಿದ್ದೇನೆ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯನವರ ವರ್ತನೆಯಿಂದ ಬೇಸತ್ತು ಪಕ್ಷ ಬಿಟ್ಟಿದ್ದೇನೆ. ನಮಗೆ ಇನ್ನೂ ಅನರ್ಹರು ಎನ್ನುವ ಸಿದ್ದರಾಮಯ್ಯರ ಮಾತು ಮತದಾರರಿಗೆ ಅವಮಾನ ಮಾಡಿದಂತೆ. ಈಗ ರಾಜ್ಯದಲ್ಲಿ ಸುಸ್ಥಿರ ಸರ್ಕಾರ ಬಂದಿದೆ. ಒಳ್ಳೆಯ ಆಡಳಿತ ಸಿಗಲಿದೆ. ಯಡಿಯೂರಪ್ಪನವರೇ ಮೂರೂವರೆ ವರ್ಷ ಮುಖ್ಯಮಂತ್ರಿ ಆಗಿ ಕೆಲಸ ಮಾಡಲಿದ್ದಾರೆ. ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡದಿರುವುದು ನೋವಾಗಿದೆ. ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು, ಯಾಕೆ ಕೊಟ್ಟಿಲ್ಲ ಎಂಬುವುದು ಗೊತ್ತಿಲ್ಲ ಎಂದರು.
ನೂತನ ಸಚಿವರ ಬಗ್ಗೆ ಮಾಜಿ ಸಚಿವ ಸಿಎಂ ಇಬ್ರಾಹಿಂ ಲಘುವಾಗಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿ.ಎಂ ಇಬ್ರಾಹಿಂ ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ. ಇಬ್ರಾಹಿಂ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಒಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಬೈಯ್ಯುತ್ತಾರೆ. ಅಧಿಕಾರ ಸಿಕ್ಕ ಬಳಿಕ ಕಾಂಗ್ರೆಸ್ಸನ್ನು ಹೊಗಳುತ್ತಾರೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಕಿಡಿಕಾರಿದರು.