ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅಧಿವೇಶನ ಬಿತ್ತರಿಸಿದ್ದಕ್ಕೆ ಮಾಧ್ಯಮಗಳಿಗೆ ಧನ್ಯವಾದ.
ಮಾತಿನಂತೆ 10 ದಿನ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದೇವೆ. ಹಲವು ಸಮಸ್ಯೆಗಳನ್ನ ಚರ್ಚಿಸಿದ್ದೇವೆ. ಹೆಚ್ಚಿನ ಪರಿಹಾರ ದೊರೆಯುವಂತೆ ಬಿಎಸ್ವೈ ಸಲಹೆ ನೀಡಿದ್ದಾರೆ. ನಾವು ಅದಕ್ಕೆ ಸ್ಪಂದಿಸಿದ್ದೇವೆ. ಒಣ ಬೇಸಾಯಕ್ಕೆ ಹೆಕ್ಟರ್ಗೆ ಇದ್ದ 6 ಸಾವಿರ ಪರಿಹಾರ 13 ಸಾವಿರಕ್ಕೆ ಏರಿಸಿದ್ದೇವೆ. ನೀರಾವರಿ 13 ದಿಂದ ಹೆಕ್ಟೇರ್ಗೆ 25 ಸಾವಿರಕ್ಕೆ ಏರಿಸಿದ್ದೇವೆ ಎಂದರು.
ಮಳೆ, ಪ್ರವಾಹದಲ್ಲಿ ಬೆಳೆ ನಷ್ಟಕ್ಕೆ ಪರಿಹಾರ ಕೊಟ್ಟಿದ್ದೇವೆ. ಕಂದಾಯ ಸಚಿವರು ಸಮರ್ಥವಾಗಿ ಉತ್ತರಿಸಿದ್ದಾರೆ. ವೇಗವಾಗಿ ಪರಿಹಾರ ವಿತರಿಸಿದ್ದೇವೆ. 14 ಲಕ್ಷ ರೈತರಿಗೆ 700 ಕೋಟಿಗೂ ಹೆಚ್ಚು ಪರಿಹಾರ ವಿತರಿಸಿದ್ದೇವೆ. ನಮ್ಮ ಸರ್ಕಾರ ರೈತರ ಪರವಾಗಿರುವ ಸರ್ಕಾರ. ಕನ್ನಡದ ಅಸ್ಮಿತೆಗೆ ಬದ್ಧರಾಗಿದ್ದೇವೆ. ಪುಂಡರಿಗೆ ಪಾಠ ಕಲಿಸಲು ನಾವು ಬದ್ಧರಾಗಿದ್ದೇವೆ ಎಂದು ವಿವರಿಸಿದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆಯೂ ಚರ್ಚೆಯಾಗಿದೆ. ಸರ್ಕಾರದಿಂದ ಸಚಿವ ಕಾರಜೋಳ ಉತ್ತರಿಸಲು ಸಿದ್ಧರಿದ್ದರು. ಆದರೆ, ಕಾಂಗ್ರೆಸ್ ನವರು ಧರಣಿ ನಡೆಸಿ ಸಚಿವರು ಉತ್ತರಿಸಲು ಬಿಡಲಿಲ್ಲ. ಪ್ರತಿಪಕ್ಷಗಳಿಗೆ ನಿಜವಾದ ಕಾಳಜಿ ಇದ್ದಿದ್ದರೆ ಸರ್ಕಾರದ ಉತ್ತರ ಕೇಳಬೇಕಿತ್ತು. ಉತ್ತರ ಕರ್ನಾಟಕದ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಮತಾಂತರ ನಿಷೇಧ ವಿಧೇಯಕ ಪಾಸ್ ಮಾಡುವ ಮೂಲಕ ಎಲ್ಲ ಧರ್ಮಗಳ ರಕ್ಷಣೆಗೆ ಒತ್ತು ನೀಡಿದ್ದೇವೆ. ದಾವೋಸ್ ಪ್ರವಾಸ ರದ್ದಾಗಿದೆ. ಅಲ್ಲಿ ಕೋವಿಡ್ ಇರುವ ಕಾರಣ ಧಾವೋಸ್ಗೆ ಹೋಗ್ತಿಲ್ಲ. ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರ್ತಿನಿ ಎಂದರು.
ಎಸ್ಸಿ- ಎಸ್ಟಿಗೆ 500 ಕೋಟಿ ರೂ. ಅನುದಾನ
ಪೂರಕ ಅಂದಾಜುಗಳಲ್ಲಿ ಎಸ್.ಸಿ ಎಸ್.ಟಿ ಗೆ 500 ಕೋಟಿ ಅನುದಾನ ಒದಗಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಕ್ಕೆ ಅನುದಾನ ಒದಗಿಸಿದ್ದೇವೆ. ಜನವರಿ ತಿಂಗಳಲ್ಲಿ ಜಂಟಿ ಸದನ ಕರೆಯುವ ತೀರ್ಮಾನ ಮಾಡಿದ್ದೇವೆ. ಹೊಸ ವರ್ಷಾಚರಣೆಗೆ ಈಗಿರುವ ಕೋವಿಡ್ ಮಾರ್ಗಸೂಚಿಯೇ ಮುಂದುವರಿಯುತ್ತೆ. ಹೋಟೆಲ್ಗಳಲ್ಲಿ 50 ಪರ್ಸೆಂಟ್ ಕಾರ್ಯನಿರ್ವಹಣೆಗೆ ಅವಕಾಶವಿದೆ. ಅದು ಮುಂದುವರೆಯುತ್ತೆ ಎಂದರು.
ವಿಪಕ್ಷ ಅನಗತ್ಯವಾಗಿ ಧರಣಿ ಮಾಡಿದ್ರು. ಉತ್ತರ ಕರ್ನಾಟಕದ ಬಗ್ಗೆ ಬೇರೆ ಬೇರೆ ರೂಪದಲ್ಲಿ ಚರ್ಚೆಯಾಗಿದೆ. ನಾನು ನೀರಾವರಿ ಸಚಿವನಾಗಿ, ಗೃಹ ಸಚಿವನಾಗಿ, ಮುಖ್ಯಮಂತ್ರಿಯಾಗಿ ಉತ್ತರ ಕರ್ನಾಟಕದ ಭಾಗಕ್ಕೆ ಏನು ಕೆಲಸ ಮಾಡಿದ್ದೇನೆ ಈ ಭಾಗದ ಜನರೇ ಹೇಳ್ತಾರೆ. ಬೇರೆಯವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾಗಿಲ್ಲ.
ಜನರನ್ನೇ ಕೇಳಿ ಅವರು ಹೇಳ್ತಾರೆ. ಜನರಿಗೆ ಚೆನ್ನಾಗಿ ಗೊತ್ತಿದೆ. ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ನಾವು ಬಂದ ಮೇಲೆ ಪ್ರಗತಿ ಸಾಧಿಸ್ತಿದ್ದೇವೆ. ಕಾಂಗ್ರೆಸ್ ನವರು ಏನು ಮಾಡಿದ್ರು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಅಂದ್ರು. ಆದ್ರೆ ಹಣ ಬಿಡುಗಡೆ ಮಾಡಲಿಲ್ಲ. ಇವರಿಂದ ನಾವು ಉತ್ತರ ಕರ್ನಾಟಕದ ಅಭಿವೃದ್ದಿ ವಿಚಾರವಾಗಿ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಒತ್ತಡದಿಂದ ನಾವು ಮತಾಂತರ ಕಾಯ್ದೆ ಪಾಸ್ ಮಾಡಲು ಹೋಗಿಲ್ಲ. ಪರಿಷತ್ನಲ್ಲಿ ನಮಗೆ ಬಹುಮತ ಇಲ್ಲ. ನಾವು ಬೇರೆ ಮಾರ್ಗಗಳಲ್ಲಿ ಬಿಲ್ ಪಾಸ್ ಮಾಡಲು ಹೋಗಿಲ್ಲ. ನಮ್ಮ ಸದಸ್ಯರನ್ನೇ ಕರೆಸಿಕೊಳ್ಳುವ ಪ್ರಯತ್ನ ಮಾಡಿದ್ವಿ. ಕೊನೆ ಹಂತದ ಒತ್ತಡದಲ್ಲಿ ಬಿಲ್ ಪಾಸ್ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಮುಂದಿನ ಅಧಿವೇಶನದಲ್ಲಿ ನಮ್ಮ ಸಂಖ್ಯಾ ಬಲದಲ್ಲೇ ವಿಧೇಯಕ ಪಾಸ್ ಮಾಡಿಕೊಳ್ತೇವೆ ಎಂದು ತಿಳಿಸಿದರು.
ಓದಿ: ಕಳೆದ ಐದು ತಿಂಗಳಲ್ಲಿ 1,076 ಅನ್ನದಾತರು ಆತ್ಮಹತ್ಯೆ: ಸದನದಲ್ಲಿ ಮಾಹಿತಿ ನೀಡಿದ ಮಹಾರಾಷ್ಟ್ರ ಸರ್ಕಾರ