ಬೆಳಗಾವಿ: ಕೊರೊನಾ ನಿಯಂತ್ರಿಸಲು ಶ್ರಮಿಸುತ್ತಿರುವ ವಾರಿಯರ್ಸ್ ಮೇಲೆಯೇ ಕೊರೊನಾ ಶಂಕಿತರು ಹಲ್ಲೆ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಮರಣಹೋಳ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.
ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 18 ಜನ ಶಂಕಿತರನ್ನು ಮಾರಣಹೋಳ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಶಂಕಿತರ ಗಂಟಲಿನ ದ್ರವ ಪಡೆಯಲು ಹೋದ ಮರಣಹೋಳ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಇಬ್ಬರು ಲ್ಯಾಬ್ ಟೆಕ್ನಿಷಿಯನ್, ಆಶಾ ಕಾರ್ಯಕರ್ತೆಯರ ಮೇಲೆ ಶಂಕಿತರು ಹಲ್ಲೆ ನಡೆಸಿ ಪುಂಡಾಟ ನಡೆಸಿದ್ದಾರೆ ಎನ್ನಲಾಗಿದೆ.
ಹತ್ತು ತಿಂಗಳ ಮಗುವನ್ನು ಕ್ವಾರಂಟೈನ್ ಮಾಡಿದ್ದನ್ನು ಶಂಕಿತರು ವಿರೋಧಿಸಿದ್ದರು. ಮಗುವನ್ನು ಕ್ವಾರಂಟೈನ್ ಕೇಂದ್ರದಿಂದ ಬಿಡುವಂತೆ ಶಂಕಿತರು ಪಟ್ಟುಹಿಡಿದ್ದರು. ಆದರೆ, ವೈದ್ಯಕೀಯ ಸಿಬ್ಬಂದಿ ಮಾತ್ರ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಕ್ವಾರಂಟೈನ್ ಮಾಡಿದ್ದರು. ಕ್ವಾರಂಟೈನ್ನಲ್ಲಿದ್ದವರ ಸ್ವ್ಯಾಬ್ ಕಲೆಕ್ಟ್ ಮಾಡಲು ಸಿಬ್ಬಂದಿ ತೆರಳಿದ್ದರು. ಈ ವೇಳೆ ಶಂಕಿತರು ಗ್ರಾಮದ ಪಿಡಿಒ, ತಲಾಟಿ ಜೊತೆಗೆ ವಾಗ್ವಾದ ನಡೆಸಿದ್ದು, ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಶಂಕಿತರು ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿ ಪುಂಡಾಟ ಮೆರೆದಿದ್ದಾರೆ ಎಂದು ತಿಳಿದುಬಂದಿದೆ. ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.