ಬೆಳಗಾವಿ : ಸರ್ಕಾರ ಉರುಳಿಸುವ, ಉಳಿಸುವ ಖ್ಯಾತಿ ಬೆಳಗಾವಿಯ ರಾಜಕಾರಣದು. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಜೋರಾಗಿದೆ. ಈ ಮಧ್ಯೆ ಕುಂದಾನಗರಿಯಲ್ಲೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಸಂಘಟನಾತ್ಮಕ ಸಭೆ ನಡೆಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ಬಿಜೆಪಿ ಪ್ರಮುಖ ಪದಾಧಿಕಾರಿಗಳು, ಶಾಸಕರು ಭಾಗಿಯಾಗಿದ್ದರು. ಸಚಿವ ಉಮೇಶ್ ಕತ್ತಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಮಹೇಶ್ ಕುಮಟಳ್ಳಿ, ದುರ್ಯೋಧನ ಐಹೊಳೆ, ಪಿ.ರಾಜೀವ್, ಮಹಾಂತೇಶ್ ದೊಡ್ಡಗೌಡರ, ಎಂಎಲ್‌ಸಿ ಮಹಾಂತೇಶ್ ಕವಟಗಿಮಠ ಸೇರಿ ಮಾಜಿ ಶಾಸಕರು ಸಭೆಯಲ್ಲಿದ್ದರು. ನಾಯಕತ್ವದ ಬದಲಾವಣೆ ಬಗ್ಗೆ ಕೇಳಿದ್ರೆ ಜಾಣ್ಮೆಯ ಉತ್ತರ ಕೊಟ್ಟರು ಕೆಎಂಎಫ್ ಅಧ್ಯಕ್ಷರು.
ವಿಶೇಷ ಅಂದ್ರೆ ರೆಬಲ್ ರಾಜಕಾರಣಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಭೆಗೆ ಆಹ್ವಾನವನ್ನೇ ನೀಡಿಲ್ವಂತೆ. ಜಿಲ್ಲೆಯಲ್ಲೇ ರಮೇಶ್ ಇದ್ರೂ ಸಭೆಗೆ ಯಾರು ಕೂಡ ಕರೆದಿಲ್ಲ. ಆದ್ರೆ, ಸಭೆ ಮುಗಿದ ಬಳಿಕ ಪ್ರತ್ಯೇಕವಾಗಿ ಅರುಣ್ ಕುಮಾರ್ ಜತೆಗೆ ಬಾಲಚಂದ್ರ ಮತ್ತು ಲಖನ್ ಜತೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದರು.
ಮುಂಬರುವ ಪರಿಷತ್, ಜಿಪಂ, ತಾಪಂ ಚುನಾವಣೆಗೆ ಸಂಘಟನೆ ಮಾಡಲು ಅರುಣ್ ಕುಮಾರ್ ಸೂಚಿಸಿದ್ದಾರಂತೆ. ಆದರೆ, ಬಿಜೆಪಿ ನಾಯಕರ ಈ ದಿಢೀರ್ ಸಭೆಗೆ ಬೇರೆ ಕಾರಣಗಳಿವೆಯಂತೆ. ಒಂದು ವೇಳೆ ನಾಯಕತ್ವ ಬದಲಾದ್ರೂ ಬೆಳಗಾವಿಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಭುಗಿಲೇಳಬಾರದು. ಪಕ್ಷದ ವಿರುದ್ಧ ಯಾರೂ ಹೋಗಬಾರದೆಂದು, ಈಗಲೇ ಸಭೆ ಮಾಡಿ ಕಟ್ಟಪ್ಪಣೆ ಮಾಡುವ ಯತ್ನ ಅಂತಾ ಹೇಳಲಾಗ್ತಿದೆ.