ಬೆಳಗಾವಿ: ಕರ್ನಾಟಕ ರತ್ನ, ಕನ್ನಡ ಅಭಿಮಾನಿಗಳ ಪಾಲಿನ ದೇವರೆಂದು ಹೆಸರಾದ ಡಾ.ಪುನೀತ್ ರಾಜಕುಮಾರ ಅವರು ಇಂದು ನಮ್ಮನ್ನೆಲ್ಲ ಅಗಲಿ ಬರೊಬ್ಬರಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ರಾಜರತ್ನನನ್ನು ಸ್ಮರಿಸುವುದರೊಂದಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಅಪ್ಪು ಭಾವಚಿತ್ರ ತೆರೆದ ವಾಹನದಲ್ಲಿ ಮೆರವಣಿಗೆ: ಮೊದಲ ವರ್ಷದ ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮದಂಗವಾಗಿ ಬೆಳಗಾವಿ ನಗರದ ಮಠಗಲ್ಲಿಯ ಚಾಣಕ್ಯ ಯುವಕ ಮಂಡಳದಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಅಪ್ಪು ಭಾವಚಿತ್ರ ಸಹಿತ ತೆರೆದ ವಾಹನದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ಅಪ್ಪು ಸಿನಿಮಾ ಹಾಡುಗಳಿಗೆ ಅಭಿಮಾನಿಗಳ ಹಜ್ಜೆ:ಈ ವೇಳೆ ಪುನೀತ್ ರಾಜಕುಮಾರ ಅಭಿನಯದ ಚಲನಚಿತ್ರದ ಹಾಡುಗಳನ್ನು ಹಾಡುವ ಮೂಲಕ ಡಾ.ರಾಜಕುಮಾರ ಅಭಿಮಾನಿಗಳ ಸಂಘ ಮತ್ತು ಚಾಣಕ್ಯ ಯುವಕ ಮಂಡಳ ಕಾರ್ಯಕರ್ತರು ಹೆಜ್ಜೆ ಹಾಕುವುದರೊಂದಿಗೆ ಗೌರವ ಸೂಚಿಸಿದರು. ಕನ್ನಡ ಹೋರಾಟಗಾರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಭಿಮಾನಿಗಳು ಕೈಯಲ್ಲಿ ಕನ್ನಡ ಬಾವುಟ ಹಿಡಿದು ಅಪ್ಪುಗೆ ನಮನ ಸಲ್ಲಿಸಿದರು.
ಭಾವಚಿತ್ರಕ್ಕೆ ಪುಷ್ಪನಮನ: ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಉತ್ತರ ಶಾಸಕ ಅನಿಲ್ ಬೆನಕೆ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ್ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಸೇರಿ ಪುನೀತ್ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವದರೊಂದಿಗೆ ಗೌರವ ಸಮರ್ಪಿಸಿದರು.
ಇಡೀ ಮಾನವ ಕುಲಕ್ಕೆ ಅಪ್ಪು ಮಾದರಿ: ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಕರುನಾಡಿನ ಹೆಮ್ಮೆಯ ನಾಯಕ. ಚಲನಚಿತ್ರ ನಟ ಪುನೀತ್ ರಾಜಕುಮಾರ ಇಂದು ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಸಾಮಾಜಿಕ ಸೇವೆ ಸಲ್ಲಿಸಿ ಮನೆ ಮನೆಯಲ್ಲಿಯೂ ಎಲ್ಲರ ಮನದಲ್ಲಿ ಹಚ್ಚು ಹಸಿರಾಗಿ ಉಳಿದಿದ್ದಾರೆ. ಪುನೀತ್ ರಾಜಕುಮಾರ ಅವರು ಮೃತಪಟ್ಟ ಬಳಿಕ ಅವರು ಮಾಡಿರುವ ಸಾಮಾಜಿಕ ಕಳಕಳಿಯ ಕೆಲಸಗಳು ಎಲ್ಲರಿಗೂ ಗೊತ್ತಾಗಿದೆ. ಇಡೀ ಮಾನವ ಕುಲಕ್ಕೆ ಅಪ್ಪು ಮಾದರಿ ಎಂದು ಸ್ಮರಿಸಿಕೊಂಡರು.
ಡಾ.ಪುನೀತ್ ಕರ್ನಾಟಕ ರಾಜ್ಯದ ಹೆಮ್ಮೆ: ನಂತರ ಶಾಸಕ ಅನಿಲ್ ಬೆನಕೆ ಮಾತನಾಡಿ ಡಾ.ಪುನೀತ್ ರಾಜ್‍ಕುಮಾರ್ ಕರ್ನಾಟಕ ರಾಜ್ಯದ ಹೆಮ್ಮೆ. ರಾಜ್ಯ ಅಷ್ಟೇ ಅಲ್ಲದೇ ಇಡೀ ದೇಶಕ್ಕೆ ಅವರು ಮಾದರಿ. ಇಷ್ಟು ದೊಡ್ಡ ಸೇವೆ ಮಾಡಿದ್ದರೂ ಕೊನೆಗಳಿಗೆವರೆಗೂ ಯಾರಿಗೂ ಗೊತ್ತಿರಲಿಲ್ಲ. ಅವರ ಸೇವೆ ಗುರುತಿಸಿ ಸಿಎಂ ಬೊಮ್ಮಾಯಿ ಅವರು ಈಗಾಗಲೇ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಬಾಲಿವುಡ್ ಘಟಾನುಘಟಿ ನಾಯಕರಿಗಿಂತೂ ದೊಡ್ಡ ವ್ಯಕ್ತಿ ಅಪ್ಪು ಎಂದು ನೆನಪಿಸಿಕೊಂಡರು.
ಇದನ್ನೂ ಓದಿ: ಪೂಜಾ ಕುಣಿತದಲ್ಲಿ ಪವರ್ ಸ್ಟಾರ್ ಫೋಟೋ.. ಅಪ್ಪುಗಾಗಿ ರುದ್ರಾಕ್ಷಿ ಹಾರ ತಂದ ಅಭಿಮಾನಿಗಳು