ಚಿಕ್ಕೋಡಿ: 2019ರ ಆಗಸ್ಟ್ ತಿಂಗಳಲ್ಲಿ ಕೃಷ್ಣಾ ನದಿಯಿಂದ ಉಂಟಾದ ಪ್ರವಾಹದ ಸಂತ್ರಸ್ತರಿಗೆ ಮನೆ ಮಂಜೂರು ಮಾಡದಿರುವುದನ್ನು ಖಂಡಿಸಿ ರಾಯಬಾಗ ತಾಲೂಕಿನ ಭಿರಡಿ ಗ್ರಾಮದ ಸಂತ್ರಸ್ತರು, ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮೂಲಕ ಪ್ರತಿಭಟನೆ ನಡೆಸಿದರು.
ಕಳೆದ ವರ್ಷ ಕೃಷ್ಣಾ ನದಿಯಿಂದ ಉಂಟಾದ ಪ್ರವಾಹ ಸಂದರ್ಭದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೆ ಇವರಿಗೆ ಸರ್ಕಾರದಿಂದ ಯಾವುದೇ ರೀತಿಯ ಮನೆಯಾಗಲಿ, ಆರ್ಥಿಕ ಸಹಾಯವಾಗಲಿ ಸಿಕ್ಕಿಲ್ಲ. ಮನೆಯನ್ನು ಕಳೆದುಕೊಂಡಿರುವ ಸಂತ್ರಸ್ತರು ಈಗಾಗಲೇ ಹಲವು ಬಾರಿ ತಹಶೀಲ್ದಾರ್ ಕಾರ್ಯಾಲಯಕ್ಕೆ ಮತ್ತು ಭಿರಡಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಇವತ್ತಿನಿಂದ ಅನಿರ್ದಿಷ್ಟಾವಧಿವರೆಗೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ಮರು ಸಮೀಕ್ಷೆ ಮಾಡುವಂತೆ ತಹಶೀಲ್ದಾರ್, ನಿಯೋಜಿತ ಅಭಿಯಂತರ ಹಾಗೂ ಪಿಡಿಒ ಮತ್ತು ಗ್ರಾಮಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದರೂ ಪ್ರಯೋಜನವಾಗಿಲ್ಲ. ನೆರೆ ಹಾವಳಿಯಲ್ಲಿ ನಿಜವಾಗಿ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಮನೆಗಳನ್ನು ಮಂಜೂರು ಮಾಡದೇ, ಮನೆ ಬೀಳದೇ ಇರುವವರಿಗೆ ಅಧಿಕಾರಿಗಳು ಮನೆ ಮಂಜೂರು ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಹಶೀಲ್ದಾರ್ ಎನ್.ಬಿ.ಗೆಜ್ಜಿ ಅವರು ಸಂತ್ರಸ್ತರನ್ನು ಸಮಾಧಾನಿಸಲು ಮುಂದಾದರು. ಆಗ ಆಕ್ರೋಶಿತ ಪ್ರತಿಭಟನಾಕಾರರು, ತಹಶೀಲ್ದಾರರನ್ನು ತೀವ್ರವಾಗಿ ತರಾಟೆಗೆ ತೆಗೆದಕೊಂಡರು. ತಮಗೆ ಮನೆ ಮಂಜೂರು ಮಾಡುವವರೆಗೂ ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ, ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಪಟ್ಟು ಹಿಡಿದರು.