ಬೆಳಗಾವಿ: ಸುವರ್ಣಸೌಧದಲ್ಲಿ ಪರಿಸರ ಕಾಳಜಿ ಮೆರೆಯುವ ನಿಟ್ಟಿನಲ್ಲಿ ಸ್ಪೀಕರ್ ಯು ಟಿ ಖಾದರ್ ಚಳಿಗಾಲದ ಅಧಿವೇಶನದಲ್ಲಿ ವಿನೂತನ ಪ್ರಯೋಗವೊಂದನ್ನು ಆರಂಭಿಸಿದ್ದಾರೆ. ಸುವರ್ಣಸೌಧದ ಆವರಣದಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ಹೆಸರಿನಲ್ಲಿ ಗಿಡ ನೆಡುವ ಮೂಲಕ ಶಾಸಕರ ಹೆಸರನ್ನು ಶಾಶ್ವತವಾಗಿ ಹಸಿರಾಗಿಸಲು ಮುಂದಾಗಿದ್ದಾರೆ.
ಸುವರ್ಣ ಸೌಧದ ಪ್ರವೇಶ ರಸ್ತೆಯ ಪಕ್ಕದಲ್ಲಿ ಹಣ್ಣು ಹಂಪಲುಗಳು ಹಾಗೂ ಅಪರೂಪದ ಹೂವು ಬಿಡುವ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ ಎಲ್ಲಾ ಶಾಸಕರ ಹೆಸರಿನಲ್ಲಿ ಗಿಡ ನೆಡುವ ಮೂಲಕ ಶಾಶ್ವತವಾಗಿ ಅವರ ಹೆಸರುಗಳು ಹಸಿರಾಗಿಸುವ ವಿನೂತನ ಕಾರ್ಯವನ್ನು ಆರಂಭಿಸಿದ್ದಾರೆ. ಸ್ಪೀಕರ್ ಸೂಚನೆಯ ಮೇರೆಗೆ ಸ್ವತಃ ಶಾಸಕರೇ ಬಂದು ಈ ಗಿಡಗಳನ್ನು ನೆಡುತ್ತಿದ್ದಾರೆ.
ಗಿಡಗಳಿಗೆ ಶಾಸಕರ ಹೆಸರು: ವಿಧಾನಸಭೆಯ 224 ಶಾಸಕರು ಹಾಗೂ ವಿಧಾನ ಪರಿಷತ್ 75 ಸದಸ್ಯರುಗಳಿಗೆ ಸುವರ್ಣ ಸೌಧದ ಬಲ ಭಾಗದಲ್ಲಿನ ಪ್ರದೇಶದಲ್ಲಿ ಗಿಡಗಳನ್ನು ನೆಡಲು ವ್ಯವಸ್ಥೆ ಮಾಡಲಾಗಿದೆ. ಅರಣ್ಯ ಇಲಾಖೆ ಗಿಡಗಳನ್ನು ನೆಡುವ ವ್ಯವಸ್ಥೆ ಮಾಡಿದೆ. ಪ್ರತಿಯೊಂದು ಗಿಡಗಳ ಮುಂದೆ ಅವುಗಳನ್ನು ನೆಟ್ಟ ಶಾಸಕರ ಹೆಸರಿನ ನೇಮ್‌ಪ್ಲೇಟ್ ಅಳವಡಿಸಲಾಗಿದೆ. ಗಿಡದ ಹೆಸರು ಹಾಗೂ ಆ ಗಿಡ ನೆಟ್ಟ ಶಾಸಕರ ಹೆಸರಿನ ಫಲಕವನ್ನು ಅಳವಡಿಸಲಾಗುತ್ತಿದೆ. ನೆಟ್ಟ ಗಿಡಗಳ ಆರೈಕೆಗೂ ಹೆಚ್ಚಿನ ಮುತುವರ್ಜಿ ನೀಡುವಂತೆ ಅರಣ್ಯಾಧಿಕಾರಿಗಳಿಗೆ ಸ್ಪೀಕರ್ ಯು ಟಿ ಖಾದರ್ ಸೂಚನೆ ನೀಡಿದ್ದಾರೆ.
ಗಿಡ ನೆಡುವ ಉದ್ದೇಶ ಏನು?: ಶಾಸಕರ ಹೆಸರಿನಲ್ಲಿ ಸುವರ್ಣ ಸೌಧದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಪರವಾದ ಸಂದೇಶವನ್ನು ನೀಡುವುದು ಮೂಲ ಉದ್ದೇಶವಾಗಿದೆ. ಶಾಸಕರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಜೊತೆಗೆ ಪರಿಸರ ಕಾಳಜಿ ಎಲ್ಲರಲ್ಲೂ ಮೂಡಿಸಲು ಸಾಧ್ಯವಾಗುತ್ತದೆ ಎಂದು ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.
ಸಭಾಧ್ಯಕ್ಷರ ಈ ವಿನೂತನ ಕಾರ್ಯಕ್ರಮಕ್ಕೆ ಎಲ್ಲಾ ಶಾಸಕರಿಂದಲೂ ಉತ್ತಮ ಸ್ಪಂದನೆ ದೊರಯುತ್ತಿದೆ. ನಿತ್ಯ ಶಾಸಕರು ನಿಯೋಜಿತ ಸ್ಥಳಕ್ಕೆ ಬಂದು ಗಿಡ ನೆಟ್ಟು, ನೀರು ಎರೆದು ತಮ್ಮ ಪರಿಸರ ಕಾಳಜಿ ತೋರುತ್ತಿದ್ದಾರೆ. ಸುವರ್ಣಸೌಧದಲ್ಲಿ ತಮ್ಮ ಹೆಸರು ಶಾಶ್ವತವಾಗಿ ಹಸಿರಾಗಿಸಲು ಮುತುವರ್ಜಿ ವಹಿಸುತ್ತಿದ್ದಾರೆ.
ಸುವರ್ಣಸೌಧದ ಸದ್ಬಳಕೆಗೆ ಕ್ರಮ: ವರ್ಷದಲ್ಲಿ ಕೇವಲ ಚಳಿಗಾಲದ ಅಧಿವೇಶನಕ್ಕೆ ಮಾತ್ರ ಸುವರ್ಣಸೌಧ ಸೀಮಿತವಾಗಿರುತ್ತೆ. ಬಳಿಕ ಯಾವುದೇ ಆಡಳಿತಾತ್ಮಕ ಚಟುವಟಿಕೆ ಇಲ್ಲದೆ ಬಿಕೋ ಎನ್ನುವಂತಿರುತ್ತೆ ಎಂಬ ಆಕ್ಷೇಪ ಹಲವರದ್ದು. ಹೀಗಾಗಿ ಸುವರ್ಣಸೌಧವನ್ನು ಚಟುವಟಿಕೆಗಳ ಕೇಂದ್ರವನ್ನಾಗಿಸಲು ಸ್ಪೀಕರ್ ಹಾಗೂ ಸಭಾಪತಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ.
ಈಗಾಗಾಲೇ ಒಂದು ಕೋಟಿ ವೆಚ್ಚದಲ್ಲಿ ಎಲ್ಇಡಿ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ದೀಪದ ಅಲಂಕಾರವನ್ನು ಮಾಡಲು ನಿರ್ಧರಿಸಲಾಗಿದೆ. ಶನಿವಾರ ಹಾಗೂ ಭಾನುವಾರದಂದು, ವಿಶೇಷ ರಾಷ್ಟ್ರೀಯ ದಿನಗಳಂದು ಸುವರ್ಣಸೌಧಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗುತ್ತದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಎಲ್ಇಡಿ ದೀಪಾಲಂಕಾರಕ್ಕೆ ಚಾಲನೆ ನೀಡಿದ್ದಾರೆ.
ಜೊತೆಗೆ ಜಂಟಿ ಅಧಿವೇಶನವನ್ನು ಸುವರ್ಣಸೌಧದಲ್ಲೇ ನಡೆಸುವ ಬಗ್ಗೆಯೂ ಸಿಎಂಗೆ ಸ್ಪೀಕರ್ ಹಾಗೂ ಸಭಾಪತಿ ಮನವಿ ಪತ್ರ ಸಲ್ಲಿಸಿದ್ದಾರೆ. ಸುವರ್ಣಸೌಧ ಹೆಚ್ಚೆಚ್ಚು ಸದ್ಬಳಕೆಯಾಗಬೇಕು. ಜೊತೆಗೆ ಸಾರ್ವಜನಿಕರಿಗೆ ಇನ್ನಷ್ಟು ನಿಕಟವಾಗಿಸಲು ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್ - ಹಮಾಸ್ ಯುದ್ದದ ಎಫೆಕ್ಟ್: ಗೋಕರ್ಣಕ್ಕೆ ಬರುವ ಇಸ್ರೇಲ್ ಪ್ರವಾಸಿಗರ ಸಂಖ್ಯೆ ಇಳಿಮುಖ