ಬೆಳಗಾವಿ: ಬೆಡ್ ಮತ್ತು ಆಕ್ಸಿಜನ್ ಸಿಗದೇ ಒಂದೇ ದಿನ ಮೂವರು ಮೃತಪಟ್ಟಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಶಿವಾನಂದ ಎಂಬುವರು ಆರೋಪಿಸಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ಎಲ್ಲಿಯೂ ಆಕ್ಸಿಜನ್ ಬೆಡ್ ಸಿಗಲಿಲ್ಲ. ಕೊನೆಗೆ ಜಿಲ್ಲಾಸ್ಪತ್ರೆಗೆ ಕರೆತಂದರೂ ಇಲ್ಲಿನ ಕೋವಿಡ್ ವಿಭಾಗದಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಹೊಂದಿರುವ ಹಾಸಿಗೆಯ ಅಲಭ್ಯತೆ ಇಲ್ಲವೆಂದು ಹೇಳಿ ದಾಖಲಿಸಿಕೊಂಡಿಲ್ಲ. ಹೀಗಾಗಿ ನನ್ನ ಆ್ಯಂಬುಲೆನ್ಸ್ ನಲ್ಲಿನ ಮೂವರು ಮೃತಪಟ್ಟಿದ್ದಾರೆ ಎಂದು ದೂರಿದರು.
ಜಿಲ್ಲಾಸ್ಪತ್ರೆಯಲ್ಲಿ ಹಣ ಕೊಟ್ಟವರಿಗೆ ಮಾತ್ರ ಹಾಸಿಗೆ ನೀಡುತ್ತಿದ್ದಾರೆ. ಸರ್ಕಾರ ಇದನ್ನು ಗಮನಿಸಬೇಕು. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕು ಎಂದು ಆ್ಯಂಬುಲೆನ್ಸ್ ಚಾಲಕ ಶಿವಾನಂದ ಎನ್ನುವವರು ಆಸ್ಪತ್ರೆ ಆವರಣದಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಮ್ಸ್ ನಿರ್ದೇಶಕ ಡಾ. ವಿನಯ್ ದಾಸ್ತಿಕೊಪ್ಪ, ನಮ್ಮಲ್ಲಿ ಆಮ್ಲಜನಕ ಕೊರತೆಯಿಂದಾಗಿ ಯಾರೂ ಸಾವಿಗೀಡಾಗಿಲ್ಲ. ಎಲ್ಲ ಹಾಸಿಗೆ ಭರ್ತಿ ಆಗಿರುವುದಕ್ಕೆ ಖಾಸಗಿ ಆಸ್ಪತ್ರೆಯಿಂದ ಬಂದವರನ್ನು ಇಲ್ಲಿ ದಾಖಲಿಸಿಕೊಳ್ಳಲು ಸಮಸ್ಯೆ ಆಗುತ್ತದೆ. ಹೀಗಾಗಿ ಇಲ್ಲಿ ಕಾಯುವುದಕ್ಕಿಂತ ಬೇರೆ ಕಡೆಗೆ ಹೋಗಿ ಎಂದು ಹೇಳಲೇಬೇಕಾಗುತ್ತದೆ ಎಂದು ತಿಳಿಸಿದರು.