ಬೆಳಗಾವಿ: ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸಂಘಟನೆ ಪ್ರತಿಭಟನೆ ನಡೆಸಿತು.
ಈ ವೇಳೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಎಷ್ಟೇ ಪ್ರಭಾವಿ ಶ್ರೀಮಂತರು, ರಾಜಕೀಯ ನಾಯಕರ ಮಕ್ಕಳು ಹಾಗೂ ಸಿನಿಮಾ ನಟ-ನಟಿಯರಿದ್ದರೂ ಅವರ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ದೇಶದ ಯುವ ಶಕ್ತಿಯನ್ನು ರಕ್ಷಿಸಿಕೊಳ್ಳಲು ಡ್ರಗ್ಸ್ ಜಾಲವನ್ನು ಸಂಪೂರ್ಣವಾಗಿ ಬುಡ ಸಮೇತ ಕಿತ್ತು ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಕ್ತಿಮೀರಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಕಠಿಣವಾದ ಕಾನೂನುಗಳನ್ನು ರೂಪಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಬೇಕು. ಜೊತೆಗೆ ಪೋಷಕರು ಎಚ್ಚರಿಕೆ ವಹಿಸುವ ಮೂಲಕ ತಮ್ಮ ಮಕ್ಕಳ ಚಲನವಲನಗಳ ಮೇಲೆ ಕಣ್ಣಿಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಶೆ ಮುಕ್ತ ದೇಶವನ್ನಾಗಿ ಮಾಡಲು ಕಠಿಣ ನಿಲುವು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.