ಬೆಳಗಾವಿ: ನಾನು ಮನಸ್ಸು ಮಾಡಿದ್ರೆ 24 ಗಂಟೆಗಳಲ್ಲಿ 5 ಜನ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸಿಪಿಎಡ್ ಮೈದಾನದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾ.ಪಂ. ಸದಸ್ಯರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನಮ್ಮನ್ನು ಮೂಲೆಯಲ್ಲಿ ಕೂರಿಸಿದ್ದರು. ಇದೀಗ ಬಿಜೆಪಿಯಲ್ಲಿ ಖುಷಿಯಿಂದ ಕೆಲಸ ಮಾಡುತ್ತಿದ್ದು, ಬಿಜೆಪಿಗೆ ಬಂದಿರುವ 17 ಶಾಸಕರು ಕೂಡ ಬಿಜೆಪಿಯಲ್ಲೇ ಗಟ್ಟಿಯಾಗಿರುತ್ತೇವೆ ಎಂದು ತಿಳಿಸಿದರು.
ಪಕ್ಷ ಪ್ರೇಮ:
ಸಿದ್ದರಾಮಯ್ಯನವರು ಇಂದಿಗೂ ನಮ್ಮ ನಾಯಕರು. ಹಾಗಾಗಿ ದಿನಕ್ಕೆ ಎರಡು ಬಾರಿ ಅವರ ಜೊತೆಗೆ ಮಾತನಾಡುತ್ತೇನೆ. ಆದ್ರೆ, ಪಕ್ಷ ಎಂದು ಬಂದರೆ ನಾವೆಲ್ಲಾ ಬಿಜೆಪಿಗರೇ ಎಂದರು.
ಕಾಂಗ್ರೆಸ್ ಶಾಸಕರ ರಾಜೀನಾಮೆ:
ನಾನು ಮನಸ್ಸು ಮಾಡಿದ್ರೆ 24 ಗಂಟೆಗಳಲ್ಲಿ ಐದು ಜನ ಕಾಂಗ್ರೆಸ್ ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ. ದೊಡ್ಡ ನಾಯಕರು ಬಿಜೆಪಿಗೆ ಬರಲು ತಯಾರಿದ್ದಾರೆ. ಟಾಪ್ 1 ರಿಂದ 5ರವರೆಗಿನ ಕಾಂಗ್ರೆಸ್ ನಾಯಕರನ್ನು ಕರೆತರುತ್ತೇನೆ. ಅವರ ಹೆಸರನ್ನು ಕೇಳಿದ್ರೆ ನೀವು ಕೂಡ ಗಾಬರಿಯಾಗುತ್ತೀರಿ. ಅಂತಹ ಮಹಾನ್ ನಾಯಕರನ್ನೇ ಬಿಜೆಪಿಗೆ ತರುತ್ತೇನೆ ಎಂದರು.
ನಾವು ಕಾಂಗ್ರೆಸ್ಗೆ ಹೋಗುವುದಿಲ್ಲ:
ನಾವು ಕಾಂಗ್ರೆಸ್ಗೆ ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರನ್ನು ಕರೆದುಕೊಂಡು ಬಂದು ಗ್ರಾಮೀಣ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದರು.
ಇನ್ನೂ ಅಧಿಕಾರದ ದುರುಪಯೋಗ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜಕಾರಣದಲ್ಲಿ ಮಾತನಾಡುವಾಗ ಅನುಭವದಿಂದ ಹುಷಾರಾಗಿ ಮಾತನಾಡಬೇಕು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಓರ್ವ ಹೆಣ್ಣು ಮಗಳು, ಅವರಿಗೆ ದೇವರು ಒಳ್ಳೆಯದು ಮಾಡಲಿ. ತಲೆ ಕೆಡಿಸಿಕೊಂಡು ಮಾತನಾಡಿದರೆ ಬಹಳ ಕಷ್ಟ ಆಗುತ್ತೆ. ಅವರ ಬಗ್ಗೆ ನಾವು ಕೆಟ್ಟದಾಗಿ ಮಾತನಾಡುವುದಿಲ್ಲ, ನೀವು ಕೂಡ ಮಾತನಾಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ, ಅಲ್ಲಲ್ಲಿ ಬಿಜೆಪಿಯನ್ನು ಮುಂದೆ ತರುವ ಕೆಲಸ ಮಾಡಲಾಗುತ್ತಿದೆ. ಮುಂದಿನ ಭಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುವ ಸಂಕಲ್ಪ ಮಾಡಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ 23 ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದಾರೆ. ಅತೀ ಶೀಘ್ರದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯರು ಎಷ್ಟಿದ್ದಾರೆ ಎಂದು ತೋರಿಸುತ್ತೇನೆ ಎಂದು ಮಾತುಕೊಟ್ಟಿದ್ದೆ. ಆ ಪ್ರಕಾರ ಇಂದು ಎಲ್ಲಾ ಸದಸ್ಯರನ್ನು ಕರೆಸಿ ಸತ್ಕಾರ ಮಾಡುತ್ತಿದ್ದೇನೆ ಎಂದರು.
ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಜನರು ನನ್ನ ಜನರು:
ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಜನರು ಹೋಗಿದ್ದಾರೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಜನರು ನನ್ನ ಜನರು. ಗ್ರಾಮೀಣ ಕ್ಷೇತ್ರದಲ್ಲಿನ ಕಾಂಗ್ರೆಸ್ ಕಾರ್ಯಕರ್ತರನ್ನು ಮುಂದಿನ ದಿನಗಳಲ್ಲಿ ಬಿಜೆಪಿಗೆ ಕರೆದುಕೊಂಡು ಬರುವ ಜವಾಬ್ದಾರಿ ನನ್ನದು ಎನ್ನುವ ಮೂಲಕ ಗ್ರಾಮೀಣ ಕ್ಷೇತ್ರದಲ್ಲಿ ಮತ್ತೆ ಆಪರೇಷನ್ ಕಮಲ ಮಾಡುವ ಮುನ್ಸೂಚನೆಯನ್ನು ರಮೇಶ ಜಾರಕಿಹೊಳಿ ಕೊಟ್ಟರು.
ಸರ್ಕಾರದ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮಾತನಾಡಿ, ಉದ್ಯೋಗ ಖಾತ್ರಿ ನಾನೇ ತಂದಿದ್ದೇನೆ ಅಂತಾ ಕೆಲವರು ಹೇಳುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಕೇಂದ್ರ ಸರ್ಕಾರ ತಂದಿದೆ ಎನ್ನುವ ಮೂಲಕ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಾಂಗ್ ಕೊಟ್ಟರು.
ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತನಾಡಿ, ರಮೇಶ್ ಜಾರಕಿಹೊಳಿ ಮಾತನಾಡಿದ್ರೆ ಆ ಕೆಲಸ ಮಾಡುತ್ತಾರೆ. ನೀವೆಲ್ಲಾ ಹುಲಿ ಜೊತೆಗೆ ಇರಿ, ಕುರಿ ಜೊತೆಗೆ ಇರಬೇಡಿ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕಿ ಹೆಬ್ಬಾಳ್ಕರ್ಗೆ ಟಾಂಗ್ ಕೊಟ್ಟರು.
ಈ ಸುದ್ದಿಯನ್ನೂ ಓದಿ: ಮೀಸಲಾತಿ ಬಗ್ಗೆ ಅವರ ಹೋರಾಟ ನ್ಯಾಯಬದ್ದವಾಗಿದೆ: ಸಿಎಂ ಬಿಎಸ್ವೈ
ರಾಮ ಮಂದಿರ ಕಟ್ಟುತ್ತಿರುವುದು ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಇದು ಕಾಂಗ್ರೆಸ್ನವರಿಗೆ ಸಾಧ್ಯವಿಲ್ಲ. ಇನ್ನೂ ಆರ್ಟಿಕಲ್ 370 ತೆಗೆಯುವ ಬೃಹತ್ ಕೆಲಸವನ್ನು ಕೂಡ ಮೋದಿ ಮಾಡಿದ್ದಾರೆ ಎಂದರು.
ರಮೇಶ್ ಜಾರಕಿಹೊಳಿ ಬಗ್ಗೆ ಜಾಸ್ತಿ ಹೇಳುವುದಿಲ್ಲ, ಜಾಸ್ತಿ ಹೇಳಿದ್ರೆ ಶಾಸಕನಾಗಲು ರಮೇಶ್ ಅವರನ್ನು ಹೊಗಳಿದ ಅಂತಾರೆ. ನಾನು ಸದ್ಯಕ್ಕೆ ಎಂಎಲ್ಎ ಕನಸು ಬಿಟ್ಟಿದ್ದೇನೆ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಕೊಡಿ ಎಂದು ರಮೇಶ್ ಜಾರಕಿಹೊಳಿ ಕಾಲು ಹಿಡಿಯಲು ಸಿದ್ದರಿದ್ದು, ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಗುರಿ ನಿಮ್ಮದು ಇದೆ ಎಂದರು.