ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಬಾಗೇವಾಡಿ ಕುಟುಂಬವೊಂದು, ದೇಶ ಸೇವೆಗೆ ಅರ್ಪಿಸಿಕೊಳ್ಳುವ ಮೂಲಕ ಮಾದರಿಯಾಗಿದೆ. ಒಂದು ಕುಟುಂಬದಿಂದ ಒಬ್ಬರೋ, ಇಬ್ಬರೋ ಸೇನೆಗೆ ಸೇರಿದ್ದನ್ನು ನಾವು ನೋಡಿದ್ದೇವೆ. ಆದರೆ, 120 ಜನ ಸದಸ್ಯರನ್ನು ಹೊಂದಿರುವ ಬಾಗೇವಾಡಿ ಕುಟುಂಬದ 16 ಜನ ದೇಶ ಸೇವೆಯಲ್ಲಿ ತೊಡಗಿದ್ದಾರೆ.
ಇವರಲ್ಲಿ ಈಗಾಗಲೇ 9 ಜನ ಮಾಜಿ ಸೈನಿಕರಾಗಿದ್ದು, ಇನ್ನೂ 7 ಜನರು ಜಮ್ಮು-ಕಾಶ್ಮೀರ ಸೇರಿ ದೇಶದ ವಿವಿಧ ಭಾಗಗಳಲ್ಲಿ ದೇಶ ಕಾಯುವ ಕಾಯಕದಲ್ಲಿ ತೊಡಗಿದ್ದಾರೆ. 1977ರಲ್ಲಿ ರುದ್ರಪ್ಪ ಎಂಬುವರು ಬಾಗೇವಾಡಿ ಕುಟುಂಬದಿಂದ ಮೊದಲಿಗರಾಗಿ ಸೇನೆಗೆ ಸೇರಿದ್ದರು. ಇವರ ಸ್ಫೂರ್ತಿಯಿಂದ ಕುಟುಂಬದ ಇನ್ನುಳಿದ 16 ಜನರು ಕೂಡ ಸೇನೆಗೆ ಸೇರಿ ನಿಸ್ವಾರ್ಥಭಾವದಿಂದ ದೇಶ ಕಾಯ್ತಿದ್ದಾರೆ. ಮನೆಯಲ್ಲಿರುವ ಎಲ್ಲ ಯುವಕರನ್ನು ಸೇನೆಗೆ ಸೇರಿಸಬೇಕು ಎಂಬ ಮಹದಾಸೆಯನ್ನು ಬಾಗೇವಾಡಿ ಕುಟುಂಬ ಹೊಂದಿದೆ.
ಅತಿ ಹೆಚ್ಚು ಸೈನಿಕರನ್ನು ದೇಶಕ್ಕೆ ನೀಡಿದ ಕೀರ್ತಿಗೆ ಗಡಿ ಜಿಲ್ಲೆ ಬೆಳಗಾವಿ ಪಾತ್ರವಾಗಿದೆ. ಜಿಲ್ಲೆಯ 50 ಸಾವಿರಕ್ಕೂ ಹೆಚ್ಚು ಜನರು ಭಾರತೀಯ ಸೇನೆಯಲ್ಲಿದ್ದಾರೆ. 10 ಸಾವಿರ ಜನಸಂಖ್ಯೆ ಹೊಂದಿರುವ ಇಂಚಲ ಗ್ರಾಮದಲ್ಲಿ 600ಕ್ಕೂ ಅಧಿಕ ಜನ ಸೇನೆಗೆ ಸೇರಿದ್ದಾರೆ. ಅದರಲ್ಲಿ 200ಕ್ಕೂ ಅಧಿಕ ಜನರು ಮಾಜಿ ಸೈನಿಕರಾಗಿದ್ದು, 450 ಜನ ಪ್ರಸ್ತುತ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ಜಿಲ್ಲೆಯ ಪ್ರತಿಷ್ಠಿತ ಇಂಚಲ ಮಠಕ್ಕೆ ಡಾ. ಶಿವಾನಂದ ಭಾರತಿ ಸ್ವಾಮೀಜಿ ಪೀಠಾಧಿಪತಿ ಆದ ಬಳಿಕ ಗ್ರಾಮದಲ್ಲಿ ಶಿಕ್ಷಣ ಕ್ಷೇತ್ರದ ಕ್ರಾಂತಿಯಾಗಿದೆ. 1970ರಲ್ಲಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿರುವ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಗ್ರಾಮದ ಪ್ರತಿಯೊಬ್ಬರಿಗೂ ಶಿಕ್ಷಣ ಕೊಡಿಸಿದ್ದಾರೆ. ಈ ಕಾರಣಕ್ಕೆ ಗ್ರಾಮದಲ್ಲಿ ಮನೆಗೊಬ್ಬರು ಸರ್ಕಾರಿ ನೌಕರಿ ಹೊಂದಿದ್ದಾರೆ. ಗ್ರಾಮದ ಪ್ರತಿ ಕುಟುಂಬ ಇಂಚಲ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ಪೂಜಿಸುತ್ತಾರೆ.